6 ವರ್ಷಗಳಿಂದ ಈ ಯುವತಿಯನ್ನು ಅತ್ಯಾಚಾರಗೈಯುತ್ತಿದ್ದ ವ್ಯಕ್ತಿ ಯಾರೆಂದು ತಿಳಿದರೆ ನೀವು ಬೆಚ್ಚಿಬೀಳುತ್ತೀರಿ!

ಗಾಝಿಯಾಬಾದ್, ಮೇ 15: 19 ವರ್ಷದ ಯುವತಿಯನ್ನು 6 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರಗೈಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ಅತ್ಯಾಚಾರಗೈದಾತ ಬೇರೆ ಯಾರೂ ಅಲ್ಲ, ಸ್ವತಃ ಆಕೆಯ ತಂದೆ!.
ಯುವತಿಯು ಮೊಬೈಲ್ ನಲ್ಲಿ ತನ್ನ ತಂದೆ ಎಸಗುತ್ತಿರುವ ದೌರ್ಜನ್ಯದ ವಿಡಿಯೋ ಮಾಡಿದ್ದು, ಇದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗಾಝಿಯಾಬಾದ್ ನಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ 43 ವರ್ಷದ ಆರೋಪಿ 6 ವರ್ಷಗಳಿಂದ ತನ್ನದೇ ಪುತ್ರಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದ. ಗಂಡನನ್ನು ಎದುರು ಹಾಕುವಷ್ಟು ಸಶಕ್ತಳಲ್ಲದಿದ್ದುದರಿಂದ ತಾಯಿಯಿಂದಲೂ ಯುವತಿಗೆ ನೆರವು ಲಭಿಸಲಿಲ್ಲ. ಆಕೆ ಅಪ್ರಾಪ್ತೆಯಾಗಿದ್ದಾಗಲೇ ಆರೋಪಿ ದೌರ್ಜನ್ಯವೆಸಗುತ್ತಿದ್ದ. ಆತನ ವಿರುದ್ಧ ಅತ್ಯಾಚಾರ ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕವಿನಗರ್ ಪೊಲೀಸ್ ಅಧಿಕಾರಿ ಹೇಮಂತ್ ರೈ ವಿವರಿಸಿದ್ದಾರೆ.
ತಂದೆಯ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಮುನ್ನ ಯುವತಿ ತನ್ನ ಸಹಪಾಠಿಗಳಲ್ಲಿ ಈ ವಿಷಯ ತಿಳಿಸಿದ್ದಳು. ವಿಷಯ ತಿಳಿದು ಆಘಾತಗೊಂಡ ಸ್ನೇಹಿತೆಯರು ಆಕೆಯ ತಾಯಿಯ ಬಳಿ ತೆರಳಿದ್ದರು.
“ಪೊಲೀಸರಿಗೆ ಮಾಹಿತಿ ನೀಡುವಂತೆ ತಾಯಿಯ ಮನವೊಲಿಸಲು ಯುವತಿಯ ಸ್ನೇಹಿತೆಯರು ತೆರಳಿದ್ದರು, ಆದರೆ ಕುಟುಂಬ ಸಮಾಜದಲ್ಲಿ ಮುಂದೆ ಅನುಭವಿಸಬೇಕಾದ ಅವಮಾನಗಳಿಂದ ಹೆದರಿದ ಆಕೆ ಸುಮ್ಮನಿದ್ದರು. ಇದೇ ಸಮಯದಲ್ಲಿ ಆರೋಪಿಯು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದು, ಯುವತಿ ಕೋಣೆಯಲ್ಲಿ ಮೊಬೈಲ್ ಕ್ಯಾಮರಾ ಆನ್ ಮಾಡಿ ವಿಡಿಯೋ ಮಾಡಿದ್ದಳು. ಯುವತಿಯ ಮೇಲೆ ದೌರ್ಜನ್ಯವೆಸಗಿ ಆಕೆಗೆ ಜೀವಬೆದರಿಕೆಯೊಡ್ಡುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ. ಈ ವಿಡಿಯೋ ಪ್ರಮುಖ ಸಾಕ್ಷಿಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ರೈ ಹೇಳಿದ್ದಾರೆ.