ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಸರಕಾರ ಚಿಂತನೆ ನಡೆಸಿದೆ: ಟಿ.ಬಿ. ಜಯಚಂದ್ರ

ತುಮಕೂರು,ಮೇ.15: ವಿದ್ಯಾವಂಚಿತ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಉದ್ಯೋಗಾಧಾರಿತ ಶಿಕ್ಷಣ ಪದ್ದತಿಯನ್ನು ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ನಗರದ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ತುಮಕೂರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ತುಮಕೂರು ಮತ್ತು ತಾಲೂಕ್ ಆಡಳಿತ ಹಾಗೂ ತಾಲೂಕ್ ಪಂಚಾಯತ್ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಕರ್ನಾಟಕ ಕಾರ್ಯಕ್ರಮದಡಿ ಕೌಶಲ್ಯ ತರಬೇತಿ ಆಕಾಂಕ್ಷಿತ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ವೆಬ್‌ಪೋರ್ಟ್ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದಲ್ಲಿರುವಷ್ಟು ಯುವಕರ ಸಂಖ್ಯೆ ಬೇರಾವ ದೇಶದಲ್ಲೂ ಇಲ್ಲ. ನಮ್ಮಲ್ಲಿ ಪದವೀಧರರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇವರೆಲ್ಲರಿಗೂ ಕುಟುಂಬ ನಿರ್ವಹಣೆಗೆ ಒಂದು ಉದ್ಯೋಗ ಬೇಕು, ಆದರೆ ಇಂದಿನ ಶಿಕ್ಷಣದಿಂದ ಉದ್ಯೋಗ ದೊರಕುವ ಭರವಸೆ ಇಲ್ಲ. ಈ ಸತ್ಯವನ್ನರಿತ ರಾಜ್ಯ ಸರಕಾರ ಇನ್ನು ಮುಂದೆ ಉದ್ಯೋಗ ಆಧಾರಿತ ಶಿಕ್ಷಣ ಪದ್ದತಿ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದರು.
ಕೇವಲ ಪದವಿ, ಡಿಪ್ಲೋಮ ಸರ್ಟಿಫಿಕೇಟ್‌ಗಳಿಂದ ಉದ್ಯೋಗ ಪಡೆದು ಜೀವನ ನಿರ್ವಹಿಸಲು ಸಾಧ್ಯವಿಲ್ಲ. ಬದಲಾಗಿ ನಮ್ಮ ಅಭಿರುಚಿಗೆ ತಕ್ಕುದಾದ ಹೆಚ್ಚು ಬೇಡಿಕೆ ಇರುವ ಉದ್ಯೋಗಗಳಲ್ಲಿನ ಕೌಶಲ್ಯ ತರಬೇತಿ ಪಡೆದಾಗ ಮಾತ್ರ ಉದ್ಯೋಗ ದೊರಕಿ ಜೀವನ ನಿರ್ವಹಿಸಲು ಸಾಧ್ಯ. ಆದ್ದರಿಂದ ರಾಜ್ಯ ಸರಕಾರ ಇಂದಿನಿಂದ 10 ದಿನಗಳ ಕಾಲ ಜಿಲ್ಲೆಯಲ್ಲಿ 18-35 ವರ್ಷದೊಳಗಿನ ಯುವಕರನ್ನು ಯಾವುದೇ ಶೈಕ್ಷಣಿಕ ನಿಬಂಧನೆಗಳಿಲ್ಲದೆ ಆಸಕ್ತಿ ಇರುವ ಎಲ್ಲರಿಗೂ ಪ್ರಸ್ತುತ 52 ವಿವಿಧ ಉದ್ಯೋಗಗಳಲ್ಲಿ ಕೌಶಲ್ಯ ತರಬೇತಿ ನೀಡಲು ಆನ್‌ಲೈನ್ ಮೂಲಕ ನೊಂದಾಯಿಸಿಕೊಳ್ಳಲಾಗುತ್ತಿದೆ. ಇದರ ಲಾಭವನ್ನು ನಿರುದ್ಯೋಗಿ ಯುವಜನರು ಪಡೆದುಕೊಳ್ಳಬೇಕೆಂದ ಸಚಿವರು, ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ನಮ್ಮ ಪ್ರತಿಭಾವಂತರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. ಇಂತಹ ಪ್ರತಿಭೆಗಳಿಗೆ ಸೂಕ್ತವಾದ ಕೌಶಲ್ಯ ತರಬೇತಿ ನೀಡಿದಲ್ಲಿ ನಮ್ಮ ದೇಶದ ಆರ್ಥಿಕತೆ ಹೆಚ್ಚಾಗಲಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ನುಡಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಶ್ರದ್ಧೆ ಜೊತೆಗೆಕೌಶಲ್ಯ ಇದ್ದಲ್ಲಿ ಯುವ ಜನರು ತಮಗೊಪ್ಪುವ ಯಾವುದೇ ಉದ್ಯೋಗ ಕೈಗೊಂಡು ಯಶಸ್ವಿಗಳಾಗಲಿದ್ದಾರೆ. ಈ ದಿಸೆಯಲ್ಲಿ ಮಾನ್ಯ ಮುಖ್ಯ ಮಂತ್ರಿ ಯುವಜನರ ಹಿತಾಸಕ್ತಿ ಕಾಪಾಡಲು ಕೌಶಲ್ಯ ತರಬೇತಿಗಾಗಿ ಗ್ರಾಮಮಟ್ಟದಿಂದ ಅಭ್ಯರ್ಥಿಗಳನ್ನು ನೋಂದಾಯಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ತುಮಕೂರು ಜಿ.ಪಂ. ಸಿಇಒ ಕೆ.ಜಿ. ಶಾಂತಾರಾಮ, ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ. 40ರಷ್ಟು ಯುವಕರಿದ್ದಾರೆ. ಯುವಶಕ್ತಿಯ ಸದ್ಭಳಕೆ ಇಂದಿನ ಅವಶ್ಯಕತೆಯಾಗಿದೆ. ನೈಪುಣ್ಯತೆ, ಕೌಶಲ್ಯದ ಕೊರತೆಯಿಂದ ನಮ್ಮಲ್ಲಿ ಇಂದು ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಕೌಶಲ್ಯವಂತ ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದೆ. ಈ ಕೊರತೆ ನಿವಾರಣೆಗೆ 18-35 ವರ್ಷದೊಳಗಿನ ಎಲ್ಲಾ ಯುವಜನರಿಗೆ ಅವರಿಗೆ ಇಷ್ಟವಾದ ಉದ್ಯೋಗದಲ್ಲಿ ಕೌಶಲ್ಯ ತರಬೇತಿ ದೊರಕಿಸಲು ರಾಜ್ಯ ಸರಕಾರ ಮುಂದಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಿಂದ ಆಸಕ್ತ ಅ್ಯರ್ಥಿಗಳನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡುವ ಕಾರ್ಯ ಇಂದಿನಿಂದಲೇ ಆರಂಭಿಸಲಾಗಿದೆ. ಜಿಲ್ಲೆಗೆ 20,600 ಯುವಜನರನ್ನು ನೊಂದಾಯಿಸಿಕೊಂಡು ಕೌಶಲ್ಯ ತರಬೇತಿ ನೀಡುವ ಗುರಿಯನ್ನು ಸರಕಾರ ನಿಗಧಿಪಡಿಸಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾರದಾ ನರಸಿಂಹಮೂರ್ತಿ ವಹಿಸಿದ್ದರು. ತುಮಕೂರು ಜಿಲ್ಲಾ ಪಂಚಾಯತ್ ಸದಸ್ಯ ಕೆಂಚಮಾರಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷ ಗಂಗಾಂಜನೇಯ, ಉಪವಿಭಾಗಾಧಿಕಾರಿ ತಬಸ್ಸುಮ್ ಜಹೇರಾ ಮುಂತಾದವರು ಹಾಜರಿದ್ದರು.







