ಕುದುರೆಮುಖ: ಮೂಲನಿವಾಸಿಗಳ ಕಾಲನಿಗೆ ವಿದ್ಯುತ್ ಸಂಪರ್ಕ
ಬೆಳ್ತಂಗಡಿ, ಮೇ 15: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವ ನಡ ಗ್ರಾಮದ ಕುದ್ಕೊಳಿ, ಕಂಬುಜೆ ಹಾಗೂ ಸವಣಾಲು ಗ್ರಾಮದ ಪಿಲಿಕಳ, ಬಾಡಡ್ಕ ಪ್ರದೇಶದ ಮೂಲನಿವಾಸಿಗಳ ಕಾಲನಿಗೆ ಕೊನೆಗೂ ವಿದ್ಯುತ್ ಸಂಪರ್ಕ ಲಭಿಸಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವ ಪ್ರದೇಶಗಳಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿನ ಜನರಿಗೆ ವಿದ್ಯುತ್ ಮರೀಚಿಕೆಯಾಗಿದೆ. ಎಲ್ಲ ಮೂಲಭೂತ ಸೌಲಭ್ಯಗಳನ್ನೂ ಒದಗಿಸುವ ಭರವಸೆ ನೀಡುವ ಅಧಿಕಾರಿಗಳು ವಿದ್ಯುತ್‌ನ ವಿಚಾರ ಬಂದಾಗ ಅದಕ್ಕೆ ಅರಣ್ಯ ಇಲಾಖೆಯತ್ತ ಬೆರಳು ತೋರಿಸುತ್ತಿದ್ದರು. ಅರಣ್ಯ ಇಲಾಖೆ ಯಾವುದೇ ಕಾರಣಕ್ಕೂ ವಿದ್ಯುತ್ ಕಂಬ ಹಾಕಿ ಲೈನ್ ಎಳೆಯಲು ಸಾಧ್ಯವಿಲ್ಲ ಎಂದು ಎಲ್ಲ ಯೋಜನೆಗಳನ್ನೂ ತಿರಸ್ಕರಿಸುತ್ತಿದ್ದರು. ಇಲ್ಲಿನ ಕಾಡಿನ ನಡುವೆ ವಾಸಿಸುತ್ತಿರುವ ಒಂಬತ್ತು ಕುಟುಂಬಗಳು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಹೋರಾಟಗಾರರು ಸಂತಸ ವ್ಯಕ್ತಪಡಿಸಿದರು.
2016 ರ ಜೂನ್ ನಲ್ಲಿ ಮೆಸ್ಕಾಂನಿಂದ ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 23 ಲಕ್ಷ ರೂ. ಮಂಜೂರಾಗಿತ್ತು. ಆದರೆ ಅಲ್ಲಿ ಅರಣ್ಯ ಇಲಾಖೆಯ ಅಡ್ಡಿ ಎದುರಾಗಿತ್ತು. ಆದರೆ ಈ ಬಾರಿ ಬಂದ ಯೋಜನೆಯನ್ನು ಕೈ ಬಿಡಲು ಜನರು ಸಿದ್ಧರಿರಲಿಲ್ಲ. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಹೋರಾಟ ನಡೆಸಿ, ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆದುಕೊಂಡಿದ್ದು, ಇದೀಗ ಕಾಮಗಾರಿ ಪ್ರಗತಿಯಲ್ಲಿದ್ದು 86 ಕಂಬಗಳು ಎದ್ದು ನಿಂತಿವೆ. ಬಾದಡ್ಕ ಎಂಬಲ್ಲಿಗೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಈ ಭಾಗದಲ್ಲಿ ಒಂಭತ್ತು ಮಲೆಕುಡಿಯ ಕುಟುಂಗಳು ಇದ್ದು ಮೂಲಭೂತ ಸೌಲಭ್ಯದಿಂದ ಮತ್ತು ಅಭಿವೃದ್ದಿಯಿಂದ ವಂಚಿತರಾಗಿದ್ದು, ಇನ್ನು ಅವರ ಮನೆಗಳಲ್ಲಿ ವಿದ್ಯುತ್ ಬೆಳಗಲಿದೆ ಎಂದು ಹೋರಾಟಗಾರರು ಹರ್ಷ ವ್ಯಕ್ತಪಡಿಸಿದರು.
ನಮಗೆ ಕೊನೆಗೂ ನ್ಯಾಯ ದೊರೆಕಿದೆ. ನಾವೂ ಇತರರಂತೆ ಬದುಕಬೇಕು ಎಂದು ಬಯಸುವುದು ತಪ್ಪೇ ? ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕಾಗಿ ಬರುತ್ತಿರುವುದು ಮಾತ್ರ ದುರಂತ. ಇತರೇ ಅಭಿವೃದ್ಧಿ ಕಾರ್ಯಗಳತ್ತಲೂ ಸರಕಾರ ಗಮನ ಹರಿಸಲಿ.
- ಜಯಾನಂದ ಪಿಲಿಕ್ಕಳ ಸ್ಥಳೀಯ ನಿವಾಸಿ.
ಕೊನೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣು ತೆರೆದಿದ್ದಾರೆ. ತಾಲೂಕಿನಲ್ಲಿ ಇನ್ನೂ 13 ಗ್ರಾಮಗಳಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದಾರೆ. ಎಲ್ಲ ಮನೆಗಳಿಗೂ ವಿದ್ಯುತ್ ಸೌಲಭ್ಯ ಒದಗಿಸಲು ಸರಕಾರದಲ್ಲಿ ಹಲವಾರು ಯೋಜನೆಗಳಿದ್ದು ಕೂಡಲೇ ಇದೇ ಮಾದರಿಯಲ್ಲಿ ಎಲ್ಲ ಕುಟುಂಬಗಳಿಗೂ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು.
ಶೇಖರ ಲಾಯಿಲ, ರಾಜ್ಯ ಸಮಿತಿ ಸದಸ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ







