ಹಳೆ ನೋಟುಗಳ ಬದಲಾವಣೆಗೆ ಯತ್ನ: ಆರೋಪಿಗಳ ಬಂಧನ

ಬೆಂಗಳೂರು, ಮೇ 15: ದೇವಸ್ಥಾನ ಬಳಿ ನಿಷೇಧಿತ 500, 1000 ರೂ. ಮುಖ ಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ 10 ಮಂದಿ ಆರೋಪಿಗಳನ್ನು ಬಸವನಗುಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 3.25 ಕೋಟಿ ರೂ.ವೌಲ್ಯದ ನಿಷೇಧಿತ ಹಳೆ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸ್ (43), ಮಹೇಶ್ (32), ಪಿ.ಕರುಣಾಕರನ್ (48), ಅಬ್ದುಲ್ ಮುಜಿಬ್ (40), ನೀಲಕಂಠ (32), ಎಚ್.ಜಿ.ಜಂಭನ ಗೌಡ (62), ನಾರಾಯಣ (48), ಉದಯಕುಮಾರ್ (34), ಕಾರ್ತಿಕ್ (32) ಮತ್ತು ಪಿ.ರುದ್ರಕುಮಾರ್ (42) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಸಾದ್, ಶಶಿ ಮತ್ತು ರಾಜೇಂದ್ರ ಎಂಬುವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವನಗುಡಿ ಠಾಣೆ ವ್ಯಾಪ್ತಿಯ ದೊಡ್ಡಗಣಪತಿ ದೇವಸ್ಥಾನದ ಬಳಿ ನಿಷೇಧಿತ ಹಳೇ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





