ಪೌರ ಕಾರ್ಮಿಕರ ಕಾಲನಿಯಲ್ಲಿ ವಿವಿಧ ಮಠಾಧಿಪತಿಗಳಿಂದ ಸಹ ಪಂಕ್ತಿ ಭೋಜನ

ಚಾಮರಾಜನಗರ, ಮೇ 15: ಸಮಾಜದಲ್ಲಿ ತಾಂಡವವಾಡುತ್ತಿರುವ ಅಸ್ಪೃಶ್ಯತೆಯನ್ನು ನಿವಾರಿಸುವ ಸಲುವಾಗಿ ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಚಾಮರಾಜನಗರದ ಪೌರ ಕಾರ್ಮಿಕರ ಬೀದಿಯಲ್ಲಿ ಸಹ ಪಂಕ್ತಿ ಬೋಜನ ಮಾಡಿದರು.
ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತಮಾಡಿ, ಅಸ್ಪೃಶ್ಯತೆ ಆಚರಣೆ ಇಂದು ಜೀವನ ಪದ್ದತಿಯೇ ಆಗಿದೆ. ಅಸ್ಪೃಶ್ಯತೆ ಇಟ್ಟುಕೊಂಡು ಹೊಸ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದ ಅವರು, ದೇವಸ್ಥಾನದಲ್ಲಿ ಪೂಜೆ ಮಾಡುವವರು ನಿಜವಾದ ಪರೋಹಿತರಲ್ಲ, ಪೌರ ಕಾರ್ಮಿಕರು ನಿಜವಾದ ಪುರೋಹಿತರು ಎಂದರು.
ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಆದರ್ಶ ನಾಯಕರನ್ನು ಕೇವಲ ನೆನೆದರೆ ಸಾಲದು. ಅವರು ತೋರಿದ ಮಾರ್ಗವನ್ನು ಅನುಸರಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸಂಸದ ಆರ್. ಧ್ರುವನಾರಾಯಣ್, ಸಚಿವ ಯು.ಟಿ.ಖಾದರ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಹಿರಿಯ ಪತ್ರಕರ್ತ ಸಾಂಬಸದಾಶಿವ ರೆಡ್ಡಿ, ರೆ.ಪಾ. ಎಸ್.ಡಿ.ಜೋಸೆಫ್ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.





