ಟ್ರಂಪ್ ವಿರುದ್ಧ ಭರಾರಾ ವಾಗ್ದಾಳಿ
ಟ್ರಂಪ್ ಪ್ರಚಾರ ತಂಡ-ರಶ್ಯ ನಂಟಿನ ತನಿಖೆಯನ್ನು ಕಾಂಗ್ರೆಸ್ ನಡೆಸಲಿ

ವಾಶಿಂಗ್ಟನ್, ಮೇ 15: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಓರ್ವ ‘ಪೀಡಕ ಕಾರ್ಯನಿರ್ವಹಣಾಧಿಕಾರಿ’ಯಾಗಿದ್ದು, ಸರಕಾರದ ಸಂಸದೀಯ ಮತ್ತು ನ್ಯಾಯಾಂಗ ಶಾಖೆಗಳಿಗೆ ಸಮಾನ ಸ್ಥಾನಮಾನವಿದೆ ಎಂಬುದನ್ನು ಮರೆತುಬಿಡುತ್ತಾರೆ ಎಂದು ಭಾರತ ಮೂಲದ ಮಾಜಿ ಪ್ರಾಸಿಕ್ಯೂಟರ್ ಪ್ರೀತ್ ಭರಾರ ವಾಗ್ದಾಳಿ ನಡೆಸಿದ್ದಾರೆ.
ಅದೇ ವೇಳೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿರುವ ಹಸ್ತಕ್ಷೇಪದ ಆರೋಪಗಳ ಬಗ್ಗೆ ಕಾಂಗ್ರೆಸ್ (ಸಂಸದೀಯ) ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾನೂನಿನ ಆಡಳಿತದಲ್ಲಿ ವಿಶ್ವಾಸ ಮೂಡಲು ಈಗ ಮೂರು ಸಂಗತಿಗಳು ನಡೆಯಬೇಕಾಗಿವೆ ಎಂದು ಹೇಳಿದರು.
ಅವುಗಳೆಂದರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪಗಳ ಬಗ್ಗೆ ಅಮೆರಿಕ ಕಾಂಗ್ರೆಸ್‌ನಲ್ಲಿ ನೈಜ ದ್ವಿಪಕ್ಷೀಯ ತನಿಖೆಯಾಗಬೇಕು, ರಾಜಕೀಯೇತರ ವ್ಯಕ್ತಿಯನ್ನು ಎಫ್‌ಬಿಐಯ ನೂತನ ನಿರ್ದೇಶಕರನ್ನಾಗಿ ನೇಮಿಸಬೇಕು ಮತ್ತು ಟ್ರಂಪ್ ಪ್ರಚಾರ ತಂಡ ರಶ್ಯದೊಂದಿಗೆ ನಂಟು ಹೊಂದಿದೆ ಎನ್ನುವ ವಿಷಯದ ತನಿಖೆಯ ಮೇಲೆ ಸ್ವತಂತ್ರ ಹಾಗೂ ರಾಜಿಮಾಡಿಕೊಳ್ಳದ ವಿಶೇಷ ವಕೀಲರೊಬ್ಬರು ನಿಗಾ ಇಡಬೇಕು.
‘‘ಕಾಂಗ್ರೆಸ್ ತನಿಖೆಯೆಂದರೆ ಏಕಪಕ್ಷೀಯ ತಲೆಹರಟೆಯಲ್ಲ. ಅದಕ್ಕೆ ವಾಸ್ತವ ಸಂಗತಿಗಳನ್ನು ಪತ್ತೆಹಚ್ಚುವ ಹಾಗೂ ನಮ್ಮ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪವನ್ನು ಹಾಗೂ ಅದಕ್ಕೆ ಸಂಬಂಧಿಸಿದ ಯಾವುದನ್ನೇ ಆದರೂ ಸಾಬೀತುಪಡಿಸುವ (ಅಥವಾ ತಳ್ಳಿಹಾಕುವ) ಬದ್ಧತೆಯಿರಬೇಕು’’ ಎಂದು ಭರಾರಾ ‘ವಾಶಿಂಗ್ಟನ್ ಪೋಸ್ಟ್’ನ ರವಿವಾರದ ಸಂಪಾದಕೀಯ ಪುಟದಲ್ಲಿ ಬರೆದ ಲೇಖನದಲ್ಲಿ ಹೇಳಿದ್ದಾರೆ.
ನ್ಯೂಯಾರ್ಕ್ ಸದರ್ನ್ ಡಿಸ್ಟ್ರಿಕ್ಟ್‌ನ ಅಟಾರ್ನಿಯಾಗಿದ್ದ ಭರಾರಾ ಅವರನ್ನು ಟ್ರಂಪ್ ಆಡಳಿತ ಮಾರ್ಚ್‌ನಲ್ಲಿ ವಜಾಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.
ಎಫ್‌ಬಿಐ ಮುಖ್ಯಸ್ಥ ರಾಜಕೀಯೇತರ ಆಗಿರಬೇಕು
‘‘ನೂತನ ಎಫ್‌ಬಿಐ ಮುಖ್ಯಸ್ಥರು ರಾಜಕೀಯೇತರ ವ್ಯಕ್ತಿಯಾಗಿರಬೇಕು ಹಾಗೂ ಕಾನೂನು ಅನುಷ್ಠಾನದ ಉದ್ದೇಶಕ್ಕೆ ಬದ್ಧತೆ ಹೊಂದಿರಬೇಕು. ಆತ ಪಕ್ಷಪಾತಪೂರಿತ ನಿರ್ಧಾರಗಳನ್ನು ತೆಗೆದುಕೊಂಡ ಸುದೀರ್ಘ ದಾಖಲೆಯನ್ನು ಹೊಂದಿರಬಾರದು ಹಾಗೂ ವಿಚಾರಣೆಗಾಗಿ ಎಫ್‌ಬಿಐಗೆ ಬರುವ ವಿಷಯಗಳ ಬಗ್ಗೆ ಸಾರ್ವಜನಿಕ ಟಿಪ್ಪಣಿಗಳನ್ನು ನೀಡುವ ವ್ಯಕ್ತಿಯಾಗಿರಬಾರದು. ಆದರೆ, ದುರದೃಷ್ಟವಶಾತ್ ಕಳೆದ ವಾರಾಂತ್ಯದ ರಿಯಲಿಟಿ ಶೋನಲ್ಲಿ ಕ್ಯಾಮರಾಗಳ ಮುಂದೆ ಕಾಣಿಸಿಕೊಂಡ ಅಭ್ಯರ್ಥಿಗಳು ಇದೇ ವರ್ಗಕ್ಕೆ ಬೀಳುವವರಾಗಿದ್ದಾರೆ’’ ಎಂದು ಪ್ರೀತ್ ಭರಾರಾ ಕಿಡಿಗಾರಿದರು.
‘‘ಜೇಮ್ಸ್ ಕಾಮಿಯನ್ನು ಎಫ್‌ಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದ ರೀತಿಯನ್ನು ನೋಡಿದರೆ, ಟ್ರಂಪ್-ರಶ್ಯ ನಂಟಿನ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲು ಸ್ವತಂತ್ರ ಹಾಗೂ ರಾಜಿಮಾಡಿಕೊಳ್ಳದ ವಿಶೇಷ ವಕೀಲರೊಬ್ಬರನ್ನು ನೇಮಿಸಬೇಕಾದ ಅಗತ್ಯವಿದೆ’’ ಎಂದು ಭರಾರಾ ಬರೆದಿದ್ದಾರೆ.







