ಖಾಯಮಾತಿಗೆ ಆಗ್ರಹಿಸಿ ಬಿಸಿಯೂಟ ನೌಕರರಿಂದ ಧರಣಿ

ಬೆಂಗಳೂರು, ಮೇ 15: ಬಿಸಿಯೂಟ ನೌಕರರನ್ನು ಅರೆಕಾಲಿಕ ಖಾಯಂ ನೌಕರರು ಎಂದು ಪರಿಗಣಿಸಬೇಕು, ಉದ್ಯೋಗ ಭದ್ರತೆ, ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಧರಣಿ ನಡೆಯಿತು.
ರಾಜ್ಯದಲ್ಲಿ 14 ವರ್ಷಗಳಿಂದ ಬಿಸಿಯೂಟ ನೌಕಕರಾಗಿ ಕೆಲಸ ಮಾಡುತ್ತಿದ್ದರೂ, ಇದುವರೆಗೂ ಕನಿಷ್ಠ ಕೂಲಿ ನೀಡಲು ಆಡಳಿತ ನಡೆಸಿದ ಯಾವುದೇ ಸರಕಾರಗಳು ಮುಂದಾಗಿಲ್ಲ. ಕೇಂದ್ರದಲ್ಲಿ ಅಧಿಕಾರ ನಡೆಸಿದ ಸರಕಾರಗಳು ಬಿಸಿಯೂಟ ನೌಕರರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಧರಣಿ ನೇತೃತ್ವ ವಹಿಸಿಕೊಂಡಿದ್ದ ಫೆಡರೇಷನ್ ಅಧ್ಯಕ್ಷ ವನ್ನಪ್ಪ ಮರೆಯಮ್ಮನವರ ಆರೋಪಿಸಿದರು.
ತಮಿಳುನಾಡಿನಲ್ಲಿ ಬಿಸಿಯೂಟ ನೌಕಕರನ್ನು ಅರೆಕಾಲಿಕ ನೌಕರರು ಎಂದು ಪರಿಗಣಿಸಲಾಗಿದೆ. ಅದೇ ರೀತಿಯಲ್ಲಿ ವಿವಿಧ ರಾಜ್ಯಗಳಲ್ಲಿ ಅರೆ ಕಾಲಿಕ ಖಾಯಂ ನೌಕರರು ಎಂದು ಪರಿಗಣಿಸಿ, ಕನಿಷ್ಠ ವೇತನ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಸರಕಾರ ಇದನ್ನು ಮಾಡಲು ಮುಂದಾಗುತ್ತಿಲ್ಲ ಎಂದ ಅವರು, ಕಳೆದ 2009 ರಿಂದ ನೌಕರರ ವೇತನ ಹೆಚ್ಚಳ ಮಾಡಿರಲಿಲ್ಲ. ಆದರೆ, 2013 ರಲ್ಲಿ 900 ರೂ.ಗಳು ಮಾತ್ರ ಹೆಚ್ಚಿಸಲಾಗಿದೆ. ಹೀಗಾಗಿ ಬಿಸಿಯೂಟ ಕಾರ್ಮಿಕರು ಮಾಸಿಕ ಕೇವಲ 1900 ದಿಂದ 2 ಸಾವಿರ ವೇತನ ಪಡೆದು ಜೀವನ ನಡೆಸಬೇಕಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆಯಲ್ಲಿ ಬಿಸಿಯೂಟ ನೌಕರರಿಗೆ ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ನೀಡಬೇಕು. ಅಡುಗೆ ತಯಾರಿಕೆ ಸಮಯದಲ್ಲಿ ಅಪಘಾತವಾದಲ್ಲಿ ನೌಕರರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ ಮೊತ್ತವನ್ನು ಐದು ಲಕ್ಷಕ್ಕೆ ಏರಿಕೆ ಮಾಡಬೇಕು. ಹಾಗೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೌಕರರನ್ನು ಕಡಿತಗೊಳಿಸುತ್ತಿರುವುದನ್ನು ನಿಲ್ಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕಿ ಸುನಂದಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಧರಣಿಯಲ್ಲಿ ಫೆಡರೇಷನ್‌ನ ಗೌರವಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಹಾವರಗೆರೆ ಚಂದ್ರು, ಸಲಹೆಗಾರ ಶಿವಣ್ಣ, ಅಂಗನವಾಡಿ ನೌಕರರ ಸಂಘದ ಮುಖಂಡರಾದ ಎಂ.ಜಯಮ್ಮ, ಎಐಟಿಯುಸಿ ಮುಖಂಡ ಎಸ್.ನಾಗರಾಜು ಇನ್ನಿತರರು ಭಾಗವಹಿಸಿದ್ದರು.







