ದೇಶಪ್ರೇಮದ ಹೆಸರಲ್ಲಿ ಆರೆಸ್ಸೆಸ್ ನ ಕಪಟತನ: ಫೈಝಲ್

ಮಂಗಳೂರು, ಮೇ 15: ದೇಶಪ್ರೇಮದ ನಾಟಕದ ಮೂಲಕ ಮುಸ್ಲಿಮರನ್ನು ಹೊರಗಿನವರನ್ನಾಗಿಸುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ. ಇವರು ದೇಶಪ್ರೇಮದ ಹೆಸರಿನಲ್ಲಿ ಕಪಟತನ ಮಾಡುತ್ತಿದ್ದಾರೆ ಎಂದು ಕೇರಳದ ಮಲ್ಲಪ್ಪುರಂನ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಎಂ. ಬಿ. ಫೈಝಲ್ ಆರೋಪಿಸಿದ್ದಾರೆ.
ನಗರದ ಬಲ್ಮಠದ ಶಾಂತಿ ನಿಲಯದ ಸಭಾಂಗಣದಲ್ಲಿ ಭಾರತ ಡಿವೈಎಫ್‌ಐ ಎರಡು ದಿನಗಳ ಕಾಲ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮದ ಮೂರನೇ ಗೋಷ್ಠಿಯಲ್ಲಿ ‘ಹೆಚ್ಚುತ್ತಿರುವ ಕೋಮುವಾದ - ಮುಸ್ಲಿಂ ಯುವಜನರ ಮುಂದಿರುವ ದಾರಿ’ ವಿಷಯದ ಕುರಿತು ವಿಚಾರ ಮಂಡಿಸಿದರು.
ತೀವ್ರ ಮತೀಯವಾದವು ದಲಿತರನ್ನು ಕೊಲ್ಲುವ ಹಂತಕ್ಕೆ ಮತ್ತು ಬರಹಗಾರರ ಪ್ರಾಣ ಹರಣ ಮಾಡುವ ಹಂತಕ್ಕೆ ಬೆಳೆದು ಭಯದ ವಾತಾವರಣವನ್ನು ನಿರ್ಮಿಸಿದೆ. ಮುಹಮ್ಮದ್ ಅಖ್ಲಾಕ್ ರ ಕಥೆ ನಮಗೆಲ್ಲರಿಗೂ ಗೊತ್ತಿದೆ. ನಮಗಿಷ್ಟವಾದ ಆಹಾರವನ್ನು ಸೇವಿಸಬಾರದು ಎಂಬ ಭಯವನ್ನು ನಮ್ಮಲ್ಲಿ ಸೃಷ್ಟಿಸಲಾಗುತ್ತಿದೆ. ಗುಜರಾತಿನಲ್ಲಿ ದನದ ಚರ್ಮವನ್ನು ಸುಲಿದರು ಎನ್ನುವ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ಮಾಡಿ ಅವರಿಗೆ ಸೆಗಣಿಯನ್ನು ತಿನ್ನಿಸಿದ ತಿನ್ನಿಸಿದ ಪ್ರಕರಣ ನಮ್ಮ ಮುಂದಿದೆ. ಯಾವ ಕಾರಣಕ್ಕಾಗಿ ಇಂದು ದಲಿತರು ಮತ್ತು ಮುಸ್ಲಿಮರ ಮೇಲೆ ಹಲ್ಲೆ, ಕೊಲೆಗಳು ನಡೆಯುತ್ತಿವೆ ಎಂದವರು ಪ್ರಶ್ನಿಸಿದರು.







