ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ
ಉಡುಪಿ, ಮೇ 15: ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಚೇರಿಯ ಅಧಿಕಾರಿಯೊಬ್ಬರು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಮೃತರನ್ನು ತೆಲಂಗಾಣ ರಾಜ್ಯದ ಶಂಕರ ಅಯ್ಯ ಎಂಬವರ ಪುತ್ರ ಅಪ್ಪಾಸಿ ಅಜಯ್(26) ಎಂದು ಗುರುತಿಸಲಾಗಿದೆ.
ಇವರು ಇಂದು ಬೆಳಗಿನ ಜಾವ 6:15ರ ಸುಮಾರಿಗೆ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಫ್ಲಾಟ್ ಫಾರಂ ಟಿಕೆಟ್ ಪಡೆದಿದ್ದು, ಬಳಿಕ ಬೆಳಗ್ಗೆ 8 ಗಂಟೆಯ ಮಂಗಳೂರು ಮಡಗಾಂವ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ.
ಇವರು ಎರಡು ವರ್ಷಗಳಿಂದ ಮಣಿಪಾಲ ಸಿಂಡಿಕೇಟ್ ಬ್ಯಾಂಕಿನಲ್ಲಿ ಕ್ಲಾಸ್ -1 ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಎ. 20ರಂದು ಮದುವೆ ನಿಶ್ಚಿತಾರ್ಥವಾಗಿದ್ದು, ಜೂನ್ ತಿಂಗಳಲ್ಲಿ ಮದುವೆಯಾಗುವುದಾಗಿ ನಿರ್ಧರಿಸಿದ್ದರು. ಇವರ ಆತ್ಮಹತ್ಯೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಇವರ ಪರ್ಸ್‌ನಲ್ಲಿ ಮೂರು ಎಟಿಎಂ ಕಾರ್ಡ್, ಬೈಕಿನ ಆರ್‌ಸಿ ಪತ್ತೆಯಾಗಿದೆ.
ಈ ವಿಚಾರವನ್ನು ಪೊಲೀಸರು ಅಜಯ್ ಮನೆಯವರಿಗೆ ತಿಳಿಸಿದ್ದು, ಮೃತನ ಕುಟುಂಬದವರು ಉಡುಪಿಗೆ ಪ್ರಯಾಣ ಬೆಳೆಸಿದ್ದಾರೆ. ಇವರದ್ದು ತೀರಾ ಬಡ ಕುಟುಂಬವಾಗಿದ್ದು, ಶಂಕರ್ ಅಯ್ಯರಿಗೆ ಇವರು ಒಬ್ಬನೆ ಪುತ್ರ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







