ವಿದೇಶಿ ಪಾವತಿ ಹಗರಣ ಭೇದಿಸಿದ ಸಿಬಿಐ
► ಆಮದು ಹೆಸರಿನಲ್ಲಿ 13 ಕಂಪೆನಿಗಳಿಂದ ವಿದೇಶಕ್ಕೆ ಅಕ್ರಮ ಹಣ ವರ್ಗಾವಣೆ ► ಕೇವಲ 24.64 ಕೋಟಿ ರೂ. ಮೌಲ್ಯದ ಆಮದಿಗಾಗಿ ವಿದೇಶಿ ಕಂಪೆನಿಗಳಿಗೆ 2200 ಕೋಟಿ ರೂ. ಪಾವತಿ

ಹೊಸದಿಲ್ಲಿ,ಮೇ 15: 2200 ಕೋಟಿ ರೂ.ಗೂ ಅಧಿಕ ಮೊತ್ತದ ಬೃಹತ್ ವಿದೇಶಿ ಪಾವತಿ ಹಗರಣವನ್ನು ತಾನು ಭೇದಿಸಿರುವುದಾಗಿ ಸಿಬಿಐ ಸೋಮವಾರ ಘೋಷಿಸಿದೆ. 2015-16ನೇ ಸಾಲಿನಲ್ಲಿ 13 ಕಂಪೆನಿಗಳು ಕೇವಲ 24.64 ಕೋಟಿ ರೂ. ಮೌಲ್ಯದ ಆಮದಿಗೆ 2200 ಕೋಟಿ ರೂ.ಗಳನ್ನು ವಿದೇಶಿ ಕಂಪೆನಿಗಳಿಗೆ ಪಾವತಿಸುವ ಮೂಲಕ ಭಾರೀ ಅಕ್ರಮವೆಸಗಿರುವುದಾಗಿ ಸಿಬಿಐ ಆರೋಪಿಸಿದೆ.
ಆಮದು ಮೌಲ್ಯಕ್ಕಿಂತ ಅಧಿಕ ಮೊತ್ತದ ಪಾವತಿಗಳನ್ನು ಮಾಡುವ ಮೂಲಕ ಸ್ಟೆಲ್‌ಕೊನ್ ಇನ್‌ಫ್ರಾಟೆಲ್ ಲಿಮಿಟೆಡ್ (ಎಸ್‌ಐಪಿಎಲ್) ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. 2015-16ರ ಅವಧಿಯಲ್ಲಿ ವಿದೇಶಿ ಕಂಪೆನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಪಾವತಿಸಿದ್ದು ಇವುಗಳ ಪೈಕಿ ಹಲವು ಹಣ ವರ್ಗಾವಣೆಯ ವ್ಯವಹಾರಗಳು ಕಂಪೆನಿಯ ಪಂಜಾಬ್ ನ್ಯಾಶನಲ್ ಬ್ಯಾಂಕ್ ಖಾತೆಯಿಂದ ನಡೆಸಲ್ಪಟ್ಟಿದ್ದವು ಎಂದು ಅದು ಆಪಾದಿಸಿದೆ. ಒಟ್ಟಾರೆ ಈ ಅವಧಿಯಲ್ಲಿ ಎಸ್‌ಐಪಿಎಲ್ ಕಂಪೆನಿಯು ಆಮದು ವ್ಯವಹಾರಕ್ಕಾಗಿನ ತನ್ನ ಆರು ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು 680.12 ಕೋಟಿ ರೂ. ಪಾವತಿಸಿತ್ತು. ಆದರೆ ವಾಸ್ತವಿಕವಾಗಿ ಈ ಅವಧಿಯಲ್ಲಿ ಅದು ಕೇವಲ ಕಸ್ಟಮ್ಸ್ ಸುಂಕ ಸಹಿತವಾಗಿ 3.14 ಕೋಟಿ ರೂ. ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು ಎಂದು ಸಿಬಿಐ ಆಪಾದಿಸಿದೆ.
ಹೆಚ್ಚುವರಿ 678.98 ಕೋಟಿ ರೂ.ಗಳನ್ನು ಎಸ್‌ಐಪಿಎಲ್ ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿದೆಯೆಂದು ಸಿಬಿಐ ಎಫ್‌ಐಆರ್‌ನಲ್ಲಿ ತಿಳಿಸಿದೆ.
ಇದೇ ರೀತಿಯ ಕಾರ್ಯವಿಧಾನವನ್ನು ಬಳಸಿಕೊಂಡು ಇತರ 12 ಕಂಪೆನಿಗಳು ಕೂಡಾ ನಕಲಿ ಆಮದು ದಾಖಲೆಗಳನ್ನು ಸಲ್ಲಿಸಿ 1,572.7 ಕೋಟಿ ರೂ. ಹಣವನ್ನು ವಿದೇಶಕ್ಕೆ ವರ್ಗಾಯಿಸಿರುವುದಾಗಿ ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿಸಿದೆ.
ಈ ಎಲ್ಲಾ ಕಂಪೆನಿಗಳು ನಕಲಿ ಅಥವಾ ಅಸ್ತಿತ್ವದಲ್ಲೇ ಇಲ್ಲದ ವಿಳಾಸಗಳನ್ನು ನೀಡಿ, ಭಾರತೀಯ ಆಮದು ಆಯೋಗದಲ್ಲಿ ನೋಂದಣಿಯನ್ನು ಮಾಡಿಸಿಕೊಂಡಿದ್ದವು. 2015 ಹಾಗೂ 2016ರಲ್ಲಿ ಮುಂಬೈ ಬಂದರು ಹಾಗೂ ಪೂರ್ವ ಮುಂಬೈನ ಜೆಎನ್‌ಪಿಟಿ ಬಂದರಿನ ಮೂಲಕ ವಿವಿಧ ಸರಕುಗಳನ್ನು ಆಮದು ಮಾಡಿಕೊಂಡಿದ್ದವು.
ಈ ಕಂಪೆನಿಗಳು ಬ್ಯಾಂಕುಗಳ ಮೂಲಕ 2252.82 ಕೋಟಿ ರೂ.ಗಳನ್ನು ಪಾವತಿಸಿದ್ದರೂ, ಅವು ಕೇವಲ 24.64 ಕೋಟಿ ರೂ. ಮೌಲ್ಯದ ಸರಕನ್ನು ಮಾತ್ರ ಆಮದು ಮಾಡಿಕೊಂಡಿದ್ದವು ಎಂದು ಸಿಬಿಐ ಎಫ್‌ಐಆರ್‌ನಲ್ಲಿ ತಿಳಿಸಿದೆ.