ಚೀನಾ-ಪಾಕ್ ಕಾರಿಡಾರ್‌ಗೆ ಕಾಶ್ಮೀರ ಪ್ರಸ್ತುತವಲ್ಲ: ಚೀನಾ
.jpg)
ಬೀಜಿಂಗ್, ಮೇ 15: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ಮೂಲಕ ಹಾದುಹೋಗುವ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ‘ಮೂರನೆಯವರನ್ನು’ ಗುರಿಯಾಗಿಸಿಲ್ಲ ಹಾಗೂ ಅದು ಕಾಶ್ಮೀರ ವಿವಾದದ ಬಗ್ಗೆ ಚೀನಾ ಹೊಂದಿರುವ ನಿಲುವನ್ನು ಬದಲಿಸುವುದಿಲ್ಲ ಎಂದು ಚೀನಾದ ವಿದೇಶ ಸಚಿವಾಲಯ ಸೋಮವಾರ ಹೇಳಿದೆ.
ಶಾಂತಿಯ ಮಾರ್ಗನಕ್ಷೆಯಾಗಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬೆಲ್ಟ್ ಮತ್ತು ರಸ್ತೆ ಉಪಕ್ರಮ (ಬಿಆರ್‌ಐ)ವನ್ನು ಆರಂಭಿಸಿದ್ದಾರೆ ಹಾಗೂ ದೇಶಗಳು ಇತರ ದೇಶಗಳ ಸಾರ್ವಭೌಮತೆ ಮತ್ತು ಭೌಗೋಳಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಬೀಜಿಂಗ್‌ನಲ್ಲಿ ಸೋಮವಾರ ಮುಕ್ತಾಯಗೊಂಡ ಎರಡು ದಿನಗಳ ಬೆಲ್ಟ್ ಆ್ಯಂಡ್ ರೋಡ್ ಫೋರಂಗೆ ಗೈರುಹಾಜರಾಗುವ ಭಾರತದ ನಿರ್ಧಾರವನ್ನು ಪ್ರಸ್ತಾಪಿಸಿದ ಸಚಿವಾಲಯ, ‘‘ಭಾರತ ಕಳವಳ ಹೊಂದಿರುವ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ, ಈ ವಿಷಯವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಇತಿಹಾಸದ ಪಳೆಯುಳಿಕೆಯಾಗಿದೆ ಹಾಗೂ ಉಭಯ ದೇಶಗಳು ಸಮಾಲೋಚನೆ ಮತ್ತು ಮಾತುಕತೆಯ ಮೂಲಕ ಅದನ್ನು ಇತ್ಯರ್ಥಪಡಿಸಿಕೊಳ್ಳಬೇಕಾಗಿದೆ ಎಂದು ನಾವು ಹೇಳುತ್ತಾ ಬಂದಿದ್ದೇವೆ’’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.







