ಮೂಡಿಗೆರೆ: ಮೆಸ್ಕಾಂ ನಿರ್ಲಕ್ಷ್ಯ ವಿರೋಧಿಸಿ ಪ್ರತಿಭಟನೆ
ಮೂಡಿಗೆರೆ, ಮೇ 15: ಕಳೆದ ಆರು ದಿನಗಳ ಹಿಂದೆ ಗ್ರಾಮದಲ್ಲಿ ಮರಗಳು ನೆಲಕ್ಕಪ್ಪಳಿಸಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದರೂ ವಿದ್ಯುತ್ ಕಂಬಗಳನ್ನು ಸರಿಪಡಿಸದೆ ಮೆಸ್ಕಾಂ ನಿರ್ಲಕ್ಷ್ಯವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಮಣ್ಣಗಂಡಿ ಹಾಗೂ ಸಚ್ಚಿನ್‌ನಗರ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಕುಡಿಯುವ ನೀರಿನ ಸಮಸ್ಯೆಯಾಗಿದ್ದು 2 ಕಿ.ಮೀ.ದೂರದಿಂದ ನೀರು ಹೊತ್ತು ತರಬೇಕಾಗಿದೆ. ವಿದ್ಯುತ್ ಇಲ್ಲದೆ ಪ್ರತೀ ದಿನವೂ ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದೇವೆ ಎಂದು ದೂರಿದ ಗ್ರಾಮಸ್ಥರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಮೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಪಂ ಮಾಜಿ ಸದಸ್ಯ ಅಬ್ದುಲ್ ರಝಾಕ್, ಗ್ರಾಮಸ್ಥ ಮಾಧವ ಮಾತನಾಡಿದರು. ಗ್ರಾಮಸ್ಥರಾದ ಲಕ್ಷ್ಮಮ್ಮ, ಗಂಗಮ್ಮ, ಜ್ಯೋತಿ ಪುಟ್ಟಸ್ವಾಮಿ ಗೌಡ, ಲಲಿತಮ್ಮ ಮತ್ತಿತರರಿದ್ದರು
ನಿರ್ವಹಣೆ ನೆಪದಲ್ಲಿ ವಿದ್ಯುತ್ ಕಡಿತ
ಮಳೆಗಾಲ ಪೂರ್ವ ವಿದ್ಯುತ್ ಮಾರ್ಗವನ್ನು ಮೆಸ್ಕಾಂ ಸರಿಪಡಿಸಿಲ್ಲ. ವಿದ್ಯುತ್ ಮಾರ್ಗ ನಿರ್ವಹಣೆ ನೆಪದಲ್ಲಿ ಇಡೀ ದಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಹೊರತು, ಎಲ್ಲೂ ಸೂಕ್ತ ನಿರ್ವಹಣೆ ನಡೆಸುತ್ತಿಲ್ಲ. ವಿದ್ಯುತ್ ಮಾರ್ಗದ ಬದಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಲವು ದಿನಗಳಿಂದ ಆಗ್ರಹಿಸುತ್ತಿದ್ದು. ತೆರವುಗೊಳಿಸದೆ ಅನಾಹುತಕ್ಕೆ ಕಾರಣವಾಗುತ್ತಿದೆ. ಸರ್ಕಾರ ಈ ಬಗ್ಗೆ ಗಂಭೀರ ವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು
- ಸಂತೋಷ್, ಹಂಡುಗುಳಿ ಗ್ರಾಮಸ್ಥ







