ಅರಣ್ಯ ಭೂಮಿ ಹಕ್ಕು ಅರ್ಜಿಯನ್ನು ಕೂಡಲೇ ಸಮೀಕ್ಷೆ ನಡೆಸಿ: ಸಚಿವ ಕಾಗೋಡು ತಿಮ್ಮಪ್ಪ

ಶಿಕಾರಿಪುರ, ಮೇ 15: ಅರಣ್ಯ ಭೂಮಿ ಹಕ್ಕು ಅರ್ಜಿಯನ್ನು ಕೂಡಲೇ ಸಮೀಕ್ಷೆ ನಡೆಸಿ ಉಪವಿಭಾಗಾಧಿಕಾರಿಗೆ ಕಳುಹಿಸಿ, ಜಿಪಿಎಸ್ ಗೂಗಲ್ ಸರ್ಚ್ ಸಮೀಕ್ಷೆ ಎಂಬ ನೆಪವೊಡ್ಡಿ ತಡಮಾಡಬೇಡಿ, ಅಧಿಕಾರಿಗಳು ಅರ್ಹರನ್ನು ದಿಕ್ಕು ತಪ್ಪಿಸುತ್ತಿದ್ದು ಇದುವರೆಗೂ ಆಗಿದ್ದು. ಇದೀಗ ನನ್ನ ತಲೆ ಕೆಟ್ಟಿದೆ ವ್ಯಾಪ್ತಿ ಮೀರಿ ವರ್ತಿಸದಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪರಿ ಇದು.
ಸೋಮವಾರ ಇಲ್ಲಿನ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ದಿಡೀರ್ ಆಗಮಿಸಿದ ಅವರು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರಣ್ಯ ಹಕ್ಕು ಅರ್ಜಿ ಎಷ್ಟು ಬಾಕಿಯುಳಿದಿದೆ ಎಂದು ಪ್ರಶ್ನಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಹಲವು ಅರ್ಜಿ ಅರಣ್ಯ ಇಲಾಖೆ ಅಧಿಕಾರಿಗಳ ಬಳಿಯಿದ್ದು ಈಗಿರುವ ಅರ್ಜಿಗಳಿಗೆ ಜಿಪಿಎಸ್ ಸಮೀಕ್ಷೆಯಾಗದೆ ಬಾಕಿಯುಳಿದಿದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದಾಗ ತೀವ್ರ ಕೆಂಡಾಮಂಡಲವಾದ ಸಚಿವರು ಜಿಪಿಎಸ್ ಗೂಗಲ್ ಸರ್ಚ್ ಎಂದು ಅರ್ಜಿಗಳನ್ನು ಬಾಕಿಯುಳಿಸಿಕೊಂಡಿದ್ದೀರಾ ? ನಿಮಗೆ ಜಿಪಿಎಸ್ ಸಮೀಕ್ಷೆಗೆ ಸೂಚಿಸಿದವರ್ಯಾರು ಕಾನೂನಿನ ಬಗ್ಗೆ ಸ್ಪಷ್ಟವಾದ ಅರಿವುಂಟಾ ಜಿಪಿಎಸ್ ಗೂಗಲ್ ಸರ್ಚ್ ಎಂದು ವ್ಯಾಪ್ತಿ ಮೀರಿ ವರ್ತಿಸಬೇಡಿ ಈಗಾಗಲೇ ಸಾಗುವಳಿದಾರರು ಭೂಮಿ ಹಕ್ಕಿಗಾಗಿ ಹಲವು ವರ್ಷ ಕಾಲದಿಂದ ಕಾದು ಕುಳಿತಿದ್ದಾರೆ. ಇದೀಗ ಅರ್ಹರಿಗೆ ಭೂಮಿ ಹಕ್ಕು ನೀಡುವ ದೃಡ ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ಸಂದರ್ಭ ವಿವಿಧ ನೆಪವೊಡ್ಡಿ ಅರ್ಹರನ್ನು ದಿಕ್ಕು ತಪ್ಪಿಸಬೇಡಿ ಎಂದರು.
ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದಲ್ಲಿ ಟ್ಯಾಂಕರ್ ಮೂಲಕ ಅಗತ್ಯವಿರುವ ನೀರು ಸರಬರಾಜು ಮಾಡುವಂತೆ ತಿಳಿಸಿದ ಅವರು ಇದಕ್ಕೆ ಎಷ್ಟು ಹಣ ಖರ್ಚಾದರೂ ನೀಡುವುದಾಗಿ ತಿಳಿಸಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಸ್ಥಳದಲ್ಲಿದ್ದ ಶಾಸಕ ರಾಘವೇಂದ್ರರಿಗೆ ಸೂಚಿಸಿದರು.
ತಾಲೂಕಿನ ಪ್ರಮುಖ ರಸ್ತೆ ಕಾಮಗಾರಿಗಳಿಗೆ ಸಮೀಪದಲ್ಲಿನ ಕೆರೆಯ ಮಣ್ಣನ್ನು ಬಳಸಿಕೊಂಡು ರೈತರ ಸಹಿತ ಸರ್ಕಾರದ ಹಣ ಉಳಿತಾಯಕ್ಕೆ ಕಳೆದ 2-3 ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟವಾದ ಸೂಚನೆಯನ್ನು ನೀಡಲಾಗಿದ್ದರೂ ಧಿಕ್ಕರಿಸಲಾಗುತ್ತಿದೆ ಸಭೆಯ ಗೌರವ ಹಾಗೂ ಜನಪ್ರತಿನಿಧಿಗಳ ಸೂಚನೆಗೆ ಬೆಲೆ ಇಲ್ಲವಾಗಿದೆ ಎಂದು ಜಿ.ಪಂ ಸದಸ್ಯ ನರಸಿಂಹನಾಯ್ಕ ತೀವ್ರವಾಗಿ ಆಕ್ಷೇಪಿಸಿದರು.
ಕೆಡಿಪಿ ಸದಸ್ಯ ಉಮೇಶ ಮಾರವಳ್ಳಿ, ಸಿಆರ್‌ಎಫ್ ಕಾಮಗಾರಿಯ ಪ್ರತಿ ಚೆಕ್ ಮೆಸರ್‌ಮೆಂಟ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಲವೆಡೆ ಕಾಮಗಾರಿಯಲ್ಲಿ ಸೂಕ್ತ ಪ್ರಮಾಣ ಸಿಮೆಂಟ್ ಬಳಸದೆ ಅಳತೆಯಲ್ಲಿ ಹೆಚ್ಚಿನ ವ್ಯತ್ಯಾಸವಿದ್ದು ಈ ಬಗ್ಗೆ ದಾಖಲೆಯನ್ನು ಹೊಂದಿರುವುದಾಗಿ ತಿಳಿಸಿದರು. ಶಾಸಕ ರಾಘವೇಂದ್ರ ಕಾಮಗಾರಿ ಬಗ್ಗೆ ತನಿಖೆಯಾದಲ್ಲಿ ಕಪ್ಪುಚುಕ್ಕೆ ಇಲ್ಲದ ರೀತಿಯಲ್ಲಿ ಪಾರದರ್ಶಕವಾಗಿ ಅಧಿಕಾರಿಗಳು ನಿರ್ವಹಿಸುವಂತೆ ತಿಳಿಸಿದರು.
ಈ ಸಂದರ್ಭ ತಾ.ಪಂ ಅಧ್ಯಕ್ಷ ಪರಮೇಶ್ವರಪ್ಪ, ಉಪಾಧ್ಯಕ್ಷೆ ರೂಪ, ಜಿ.ಪಂ ಸದಸ್ಯೆ ಮಮತಾಸಾಲಿ, ರೇಣುಕಾ, ಆರುಂಧತಿ, ಕೆಡಿಪಿ ಸದಸ್ಯ ಭಂಡಾರಿ ಮಾಲತೇಶ, ಉಮೇಶಪ್ಪ, ಹನುಮಂತಪ್ಪ ತಹಸೀಲ್ದಾರ್ ಶಿವಕುಮಾರ್. ಇಒ ಆನಂದಕುಮಾರ, ಸಹಾಯಕ ಕೃಷಿ ನಿರ್ದೇಶಕ ಪ್ರಭಾಕರ್, ತಾ.ವೈದ್ಯಾಧಿಕಾರಿ ಡಾ.ಮಂಜುನಾಥ ಸಹಿತ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.







