ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ, ನೋಂದಣಿಯ ಕೌಶಲ್ಯ ವೆಬ್ ಪೋರ್ಟಲ್‌ಗೆ ಕಾಗೋಡು ತಿಮ್ಮಪ್ಪ ಚಾಲನೆ

ಶಿವಮೊಗ್ಗ, ಮೇ 15: ದುಡಿಯುವ ಕೈಗೆ ಶಕ್ತಿ ತುಂಬುವುದೇ ದೊಡ್ಡ ಸಾಧನೆ ಅದನ್ನು ಕರ್ನಾಟಕ ರಾಜ್ಯ ಸರ್ಕಾರ ಮಾಡಿದೆ ಎಂದು ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿಯ ಕೌಶಲ್ಯ ವೆಬ್ ಪೋರ್ಟಲ್ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ವಿದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದೆ. ಆದರೆ ಅವರಿಗೆ ಕೌಶಲ್ಯಯುತ ಪ್ರತಿಭೆಗಳ ಅವಶ್ಯಕತೆ ಇದೆ. ನಿರುದ್ಯೋಗಿಗಳನ್ನು ಅಂತಹ ಕೌಶಲ್ಯಯುತರನ್ನಾಗಿ ರೂಪಿಸಿ ಉದ್ಯೋಗ ದೊರಕುವಂತೆ ಮಾಡುವ ಮಹತ್ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ದುಡಿಯುವ ಕೈಗೆ ಶಕ್ತಿ ತುಂಬುವ ದೊಡ್ಡ ಸಾಧನೆ ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಕ್ತಕಂಠದಿಂದ ಅವರು ಶ್ಲಾಘಿಸಿದರು.
ದೇಶದಲ್ಲಿ ಶೇ. 60 ಯುವಜನರಿದ್ದಾರೆ. ಅವರನ್ನು ಸುಪಯೋಗಪಡಿಸಕೊಳ್ಳುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕೆ ಈ ಕಾರ್ಯಕ್ರಮ ನಾಂದಿಯಾಗಿದ್ದು ಸುಮಾರು 504 ಕೌಶಲ್ಯಗಳನ್ನು ನೀಡಲು ಈ ಕಾರ್ಯಕ್ರಮ ಉದ್ದೇಶಿಸಿದ್ದು ಪ್ರತಿ ನಿರುದ್ಯೋಗಿ ಐದು ಕೌಶಲ್ಯಗಳಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಮುಂದಿನ ಏಳು ದಿನಗಳ ಕಾಲ ತಾಲೂಕು ಮಟ್ಟದಲ್ಲಿ ನಡೆಯುವ ನೋಂದಣಿ ಕಾರ್ಯಕ್ರಮದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಿರುದ್ಯೋಗಿ ಯುವಜನರಿಗೆ ಇದೊಂದು ಅಪರೂಪದ ಅವಕಾಶ. ರಾಜ್ಯದ ಯುವಜನರಿಗೆ ಉದ್ಯೋಗ ಕೊಡುವ ಈ ಕಾರ್ಯಕ್ರಮ ಚರಿತ್ರೆಯ ಭಾಗವಾಗಿ ಉಳಿಯುತ್ತದೆ. ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆ ದೇಶದ ಬಹುದೊಡ್ಡ ಸವಾಲು. ಅಂತಹ ಸವಾಲನ್ನು ಸ್ವೀಕರಿಸಿದ ರಾಜ್ಯ ಸರ್ಕಾರ ನಿರುದ್ಯೋಗಿ ಯುವಜನರಿಗೆ ಕೌಶಲ್ಯ ನೀಡುವ ಮೂಲಕ ರಾಜ್ಯದ ಇತಿಹಾಸದಲ್ಲೇ ಬಹುದೊಡ್ಡ ಗುರುತನ್ನು ಮೂಡಿಸಿದೆ. ಈ ಮೂಲಕ ರಾಜ್ಯ ಲಕ್ಷಾಂತರ ಮಂದಿಗೆ ಉದ್ಯೋಗಸ್ಥರಾಗಲು ಸರ್ಕಾರ ಮುನ್ನಡಿ ಬರೆದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ಕೌಶಲ್ಯ ಇದ್ದರೆ ಎಲ್ಲಾದರೂ ಬದುಕಬಹುದು. ಅಂತಹ ಒಳ್ಳೆಯ ಕೆಲಸಕ್ಕೆ ರಾಜ್ಯ ಸರ್ಕಾರ ಕೈ ಹಾಕಿರುವುದು ಸ್ವಾಗತಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಬಿ.ಪ್ರಸನ್ನಕುಮಾರ್, ನಿರುದ್ಯೋಗಿ ಯುವಕರಿಗೆ ಉದ್ಯೋಗ ಲಭಿಸುವಂತ ಕೌಶಲ್ಯ ನೀಡುವ ಶ್ರೇಷ್ಠ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಪ್ರಸಕ್ತ ಸಾಲಿನಲ್ಲಿ ಐದು ಲಕ್ಷ ಯುವಜನರಿಗೆ ಕೌಶಲ್ಯ ನೀಡಿ ಉದ್ಯೋಗ ನೀಡಲು ಸರ್ಕಾರ ಉದ್ದೇಶಿಸಿರುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿಕುಮಾರ್ ಸ್ವಾಗತ ಮಾಡಿದರು. ಜಿಲ್ಲಾಧಿಕಾರಿ ಎಂ.ಲೋಕೇಶ್ ಪ್ರಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೇ.ರಾಕೇಶ್‌ಕುಮಾರ್ , ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮುಲೈ ಮುಹಿಲನ್ ಮತ್ತಿತರರು ಉಪಸ್ಥಿತರಿದ್ದರು.







