ಉಡುಪಿ ಕೌಶಲ್ಯ ಅಭಿವೃದ್ದಿಗೆ ಪ್ರಶಸ್ತ್ತವಾದ ಜಿಲ್ಲೆ: ಸಚಿವ ಪ್ರಮೋದ್
ವೆಬ್ ಪೋರ್ಟಲ್- ಕೌಶಲ್ಯ ತರಬೇತಿ ನೋಂದಣಿಗೆ ಚಾಲನೆ

ಉಡುಪಿ, ಮೇ 15: ಉಡುಪಿ ಜಿಲ್ಲೆ ಈ ಬಾರಿ ಎಸೆಸೆಲ್ಸಿ ಹಾಗೂ ಪಿಯುಸಿ ಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು, ಇಲ್ಲಿರುವಷ್ಟು ಉತ್ತಮ ಮಾನವ ಸಂಪನ್ಮೂಲ ಬೇರೆ ಯಾವುದೇ ಭಾಗದಲ್ಲಿ ಇರಲು ಸಾಧ್ಯವಿಲ್ಲ. ಆದುದರಿಂದ ಕೌಶಲ್ಯ ಅಭಿವೃದ್ದಿಗೆ ಉಡುಪಿ ಪ್ರಶಸ್ತವಾದ ಜಿಲ್ಲೆಯಾಗಿದೆ. ಇಲ್ಲಿನ ವಿದ್ಯಾರ್ಥಿಗಳ ಸಾಧನೆ, ಶಿಕ್ಷಕರು ಹಾಗೂ ಶಾಲೆಗಳ ಗುಣಮಟ್ಟವು ಇದನ್ನು ಸ್ಪಷ್ಟಪಡಿಸುತ್ತದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸೋಮವಾರ ವೆಬ್ ಪೋರ್ಟಲ್ ಹಾಗೂ ಕೌಶಲ್ಯ ತರಬೇತಿ ಆಕಾಂಕ್ಷಿತ ಯುವ ಜನರ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉದ್ಯೋಗ ಮೇಳಗಳಲ್ಲಿ ಶೇ.10ರಷ್ಟು ಮಂದಿ ಮಾತ್ರ ಉದ್ಯೋಗ ಪಡೆದು ಕೊಂಡರೆ, ಉಳಿದ ಶೇ.90ರಷ್ಟು ಮಂದಿ ನಿರಾಶೆಯಿಂದ ಹೊರಹೋಗುತ್ತಿ ದ್ದಾರೆ. ಇದಕ್ಕೆ ಕಾರಣ ಅವರಲ್ಲಿ ಇರುವ ಕೌಶಲ್ಯದ ಕೊರತೆಯಾಗಿದೆ. ಯುವಜನತೆಯ ಮೇಲೆ ಭರವಸೆ ಹೊಂದಿರುವ ಮುಖ್ಯಮಂತ್ರಿಗಳು ಕೌಶಲ್ಯಾ ಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದು ಯುವಕರ ಭವಿಷ್ಯ ರೂಪಿಸುವ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 5ಲಕ್ಷ ಯುವಜನತೆಗೆ ಕೌಶಲ್ಯಾಭಿವೃದ್ಧಿ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 9100 ಮಂದಿಯನ್ನು ನೋಂದಾವಣಿ ಮಾಡಿ ಕೌಶಲ್ಯಾಭಿವೃದ್ದಿ ನೀಡುವ ಗುರಿ ನೀಡಲಾಗಿದೆ. ಇವರಲ್ಲಿ 809 ಪರಿಶಿಷ್ಟ ಜಾತಿ, 450 ಪರಿಶಿಷ್ಟ ಪಂಗಡ, 1309 ಅಲ್ಪಸಂಖ್ಯಾತರು, 7000 ಇತರ ವರ್ಗದವರು ಎಂದು ಅವರು ತಿಳಿಸಿದರು.
ನೋಟು ರದ್ಧತಿಯ ಪರಿಣಾಮ ಸಾಕಷ್ಟು ಮಂದಿ ಯುವಕರು ಇಂದು ಉದ್ಯೋಗ ಕಳೆದುಕೊಂಡಿದ್ದಾರೆ. ಸದ್ಯವೇ ಎರಡು ಲಕ್ಷದಷ್ಟು ಐಟಿ ಉದ್ಯೋಗಿ ಗಳು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ. ಈಗ ಪ್ರಧಾನಿ ಮೋದಿ ಯುವಕರಿಗೆ ಉದ್ಯೋಗ ನೀಡುವ ಕುರಿತು ಯೋಚಿಸುವ ಕಾಲ ಎದುರಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕೃಷಿ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಎಂ.ಮಹೇಶ್ವರ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸದಸ್ಯೆ ಗೋಪಿ ನಾಯ್ಕೆ ಮುಖ್ಯ ಅತಿಥಿಗಳಾಗಿದ್ದರು.
ಪೌರಾಯುಕ್ತ ಡಿ.ಮಂಜುನಾಥಯ್ಯ, ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ರಮಾನಂದ ನಾಯಕ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಡಿಡಿಪಿಐ ದಿವಾಕರ ಶೆಟ್ಟಿ, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ಕೌಶಲ್ಯ ಮಿಷನ್ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ನಯನಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಕೃಷ್ಣ ಶಿವತ್ತಾಯ ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







