ಸ್ಮಿತ್ ಯಶಸ್ಸಿನ ಹಿಂದೆ ಧೋನಿ: ಸ್ಟೋಕ್ಸ್

ಪುಣೆ, ಮೇ 15: ಸ್ಟೀವನ್ ಸ್ಮಿತ್ ಪುಣೆ ತಂಡದ ನಾಯಕನಾಗಿ ಯಶಸ್ಸು ಸಾಧಿಸಲು ವಿಕೆಟ್‌ಕೀಪರ್ ಎಂಎಸ್ ಧೋನಿ ಕಾರಣ ಎಂದು ಐಪಿಎಲ್‌ನ ದುಬಾರಿ ಆಟಗಾರ ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟರು.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಜಯ ಸಾಧಿಸಿದ್ದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದ್ದು, ಅಂಕಪಟ್ಟಿಯಲ್ಲಿ 2ನೆ ಸ್ಥಾನ ಪಡೆದಿತ್ತು.
‘‘ವಿಶ್ವದೆಲ್ಲೆಡೆಯ ಕೆಲವು ಶ್ರೇಷ್ಠ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವ ತಾನು ಐಪಿಎಲ್ ಆಡುವ ಮೂಲಕ ಸಾಕಷ್ಟು ಪಾಠ ಕಲಿತ್ತಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಮ್ಮ ವಿರುದ್ಧ ಆಡಿರುವ ಆಟಗಾರನ ಬಗ್ಗೆ ಗೊತ್ತಿರುವುದಿಲ್ಲ. ಟ್ವೆಂಟಿ-20 ಲೀಗ್‌ನಲ್ಲಿ ಎಲ್ಲ ಆಟಗಾರರ ಪರಿಚಯ ಚೆನ್ನಾಗಿ ಆಗುತ್ತದೆ. ಎಂಎಸ್ ಹಾಗೂ ಸ್ಟೀವ್‌ರಂತಹ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವುದು ತನ್ನ ಸೌಭಾಗ್ಯ’’ ಎಂದು ಸ್ಟೋಕ್ಸ್ ಹೇಳಿದರು.
ತಂಡ ವಾಸ್ತವ್ಯವಿರುವ ಹೊಟೇಲ್‌ನಲ್ಲಿ ಎಂಎಸ್ ಯಾವಾಗಲೂ ತನ್ನ ರೂಮ್‌ನ ಬಾಗಿಲನ್ನು ತೆರೆದಿಡುತ್ತಾರೆ. ಯಾರೂಕೂಡ ಅವರ ರೂಮ್‌ಗೆ ಹೋಗಬಹುದು. ಎಲ್ಲರ ಮಾತನ್ನು ಅವರು ಆಲಿಸುತ್ತಾರೆ. ಅವರೊಂದಿಗೆ ಯಾರೂ ಕೂಡ ಮಾತನಾಡಬಹುದು. ಮೈದಾನದಲ್ಲಿ ಅವರು ತುಂಬಾ ಶಾಂತವಾಗಿರುತ್ತಾರೆ. ಕ್ರಿಕೆಟ್ ದೃಷ್ಟಿಯಲ್ಲಿ ಹೇಳಬೇಕಾದರೆ ಕ್ಷೇತ್ರರಕ್ಷಣೆಯನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ಇಂಗ್ಲೆಂಡ್ ಆಟಗಾರ ಹೇಳಿದ್ದಾರೆ.





