ಮೂರನೆ ಟೆಸ್ಟ್: ವಿಂಡೀಸ್ ವಿರುದ್ಧ ಪಾಕ್‌ಗೆ ರೋಚಕ ಜಯ
ಸರಣಿ ಕೈವಶ, ಯೂನಿಸ್‌ಖಾನ್-ಮಿಸ್ಬಾವುಲ್‌ಹಕ್‌ಗೆ ಗೆಲುವಿನ ಉಡುಗೊರೆ

ಡೊಮಿನಿಕ, ಮೇ 15: ವೆಸ್ಟ್‌ಇಂಡೀಸ್ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 101 ರನ್ ಅಂತರದಿಂದ ಗೆದ್ದುಕೊಂಡಿರುವ ಪಾಕಿಸ್ತಾನ ಕೆರಿಬಿಯನ್ ನಾಡಿನಲ್ಲಿ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಜಯಿಸಿದೆ. ಈ ಮೂಲಕ ನಿವೃತ್ತಿ ಘೋಷಿಸಿರುವ ನಾಯಕ ಮಿಸ್ಬಾವುಲ್ ಹಕ್ ಹಾಗೂ ಹಿರಿಯ ಆಟಗಾರ ಯೂನಿಸ್ ಖಾನ್‌ಗೆ ಗೆಲುವಿನ ಉಡುಗೊರೆ ನೀಡಿದೆ.
ಇಲ್ಲಿನ ವಿಂಡ್ಸರ್ ಪಾರ್ಕ್‌ನಲ್ಲಿ 3ನೆ ಟೆಸ್ಟ್ ಗೆಲುವಿಗೆ 303 ರನ್ ಗುರಿ ಪಡೆದಿದ್ದ ವಿಂಡೀಸ್ ತಂಡ ರಾಸ್ಟೊನ್ ಚೇಸ್ ಅಜೇಯ 101 ರನ್ ಹೊರತಾಗಿಯೂ 202 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತು.
ವಿಂಡೀಸ್ ಒಂದು ಹಂತದಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 93 ರನ್ ಗಳಿಸಿತ್ತು. ಬಾಲಂಗೋಚಿಗಳ ನೆರವಿನಿಂದ ಹೋರಾಟ ನಡೆಸಿದ ಚೇಸ್ ಪಂದ್ಯವನ್ನು ಡ್ರಾಗೊಳಿಸಲು ವಿಫಲಯತ್ನ ನಡೆಸಿದರು. ಅಂತಿಮ ದಿನದಾಟ ಕೊನೆಗೊಳ್ಳಲು ಒಂದು ಓವರ್ ಬಾಕಿ ಇರುವಾಗ ವಿಂಡೀಸ್‌ನ ಕೊನೆಯ ಆಟಗಾರ ಶಾನೊನ್ ಗ್ಯಾಬ್ರಿಯಲ್ ವಿಕೆಟ್ ಉರುಳಿಸಿದ ಸ್ಪಿನ್ನರ್ ಯಾಸಿರ್ ಶಾ ತಂಡಕ್ಕೆ ರೋಚಕ ಗೆಲುವು ತಂದರು.
ವಿಂಡೀಸ್‌ನ ಮೊದಲ ಇನಿಂಗ್ಸ್‌ನಲ್ಲಿ 69 ರನ್ ಗಳಿಸಿದ್ದ ಚೇಸ್ ಎರಡನೆ ಇನಿಂಗ್ಸ್‌ನಲ್ಲಿ ಶತಕ ಗಳಿಸಿದರೂ ಅದು ವ್ಯರ್ಥವಾಯಿತು. ತಂಡ ಸೋಲುಂಡರೂ ಚೇಸ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಎರಡು ಬಾರಿ ಜೀವದಾನ ಪಡೆದಿದ್ದ ಚೇಸ್ ಕೊನೆಗೂ ಟೆಸ್ಟ್‌ನಲ್ಲಿ ಮೂರನೆ ಶತಕ ಬಾರಿಸಿದರು. 22 ಎಸೆತಗಳನ್ನು ಎದುರಿಸಿ ತಂಡವನ್ನು ಡ್ರಾದತ್ತ ಕೊಂಡೊಯ್ಯುವ ಯತ್ನ ನಡೆಸಿದ್ದ ಗ್ಯಾಬ್ರಿಯಲ್(4) ಅವರು ಶಾ ಎಸೆತವನ್ನು ಕೆಣಕಲು ಹೋಗಿ ವಿಕೆಟ್ ಒಪ್ಪಿಸಿದರು. ಶಾ 92 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 25 ವಿಕೆಟ್‌ಗಳ ಗೊಂಚಲು ಪಡೆದರು. ಸರಣಿಯಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ ಶಾ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ವಿಂಡೀಸ್ ರನ್ ಚೇಸಿಂಗ್‌ನ ವೇಳೆ ಆರಂಭಿಕ ಕುಸಿತ ಕಂಡಿತು. 1 ವಿಕೆಟ್ ನಷ್ಟಕ್ಕೆ 7 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್ ಒಂದು ಹಂತದಲ್ಲಿ 96 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಆಟಗಾರರಾದ ಬ್ರಾತ್‌ವೇಟ್(6) ಹಾಗೂ ಪೊವೆಲ್(4) ಸಂಪೂರ್ಣ ವಿಫಲರಾದರು. ವಿಶಾಲ್ ಸಿಂಗ್(2) ಹಾಗೂ ಶಾನ್ ಡೌರಿಚ್(2) ಬೇಗನೆ ಔಟಾಗಿರುವುದು ವಿಂಡೀಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತು.
7ನೆ ವಿಕೆಟ್‌ಗೆ 58 ರನ್ ಸೇರಿಸಿದ ಚೇಸ್ ಹಾಗೂ ನಾಯಕ ಜೇಸನ್ ಹೋಲ್ಡರ್ ತಂಡವನ್ನು ಆಧರಿಸಿದರು. ಒಂದೂವರೆ ಗಂಟೆ ಕಾಲ ಕ್ರೀಸ್‌ನಲ್ಲಿದ್ದ ಈ ಜೋಡಿ ಪಾಕ್ ಬೌಲರ್‌ಗಳನ್ನು ಸತಾಯಿಸಿತು. ಟೀ ವಿರಾಮದ ಬಳಿಕ 22 ರನ್ ಗಳಿಸಿದ್ದ ಹೋಲ್ಡರ್ ಅವರು ಹಸನ್ ಅಲಿಗೆ ವಿಕೆಟ್ ಒಪ್ಪಿಸಿದರು.
ದೇವೇಂದ್ರ ಬಿಶೂ(3) ಹಾಗೂ ಜೋಸೆಫ್(5) ಒಂದಷ್ಟು ಪ್ರತಿರೋಧ ಒಡ್ಡಿದರು. ಗ್ಯಾಬ್ರಿಯಲ್ ಸುಮಾರು 8 ಓವರ್‌ಗಳನ್ನು ದಿಟ್ಟವಾಗಿ ಎದುರಿಸಿದಾಗ ವಿಂಡೀಸ್ 3ನೆ ಪಂದ್ಯ ಡ್ರಾಗೊಳಿಸುವ ವಿಶ್ವಾಸದಲ್ಲಿತ್ತು. ಆದರೆ, ಪಾಕ್‌ನ ಸ್ಪಿನ್ ಬೌಲರ್ ಶಾ ಇದಕ್ಕೆ ಅವಕಾಶ ನೀಡಲಿಲ್ಲ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 376
ಪಾಕಿಸ್ತಾನ ಎರಡನೆ ಇನಿಂಗ್ಸ್: 174/8 ಡಿಕ್ಲೇರ್
ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್: 247
ವೆಸ್ಟ್‌ಇಂಡೀಸ್ ಎರಡನೆ ಇನಿಂಗ್ಸ್: 202 ರನ್‌ಗೆ ಆಲೌಟ್
(ಚೇಸ್ ಅಜೇಯ 101, ಹೋಲ್ಡರ್ 22, ಹೆಟ್ಮೆರ್ 25, ಶಾ 5-92, ಅಲಿ 3-33)
ಪಂದ್ಯಶ್ರೇಷ್ಠ: ಚೇಸ್
ಸರಣಿಶ್ರೇಷ್ಠ: ಯಾಸಿರ್ ಶಾ.







