ಮ್ಯಾಡ್ರಿಡ್ ಮಾಸ್ಟರ್ಸ್: ನಡಾಲ್‌ಗೆ ಪ್ರಶಸ್ತಿ

ಮ್ಯಾಡ್ರಿಡ್, ಮೇ 15: ಆವೆಮಣ್ಣಿನ ಅಂಗಳದಲ್ಲಿ ಶ್ರೇಷ್ಠ ಫಾರ್ಮ್ ಮುಂದುವರಿಸಿದ ಸ್ಪೇನ್‌ನ ರಫೆಲ್ ನಡಾಲ್ ಐದನೆ ಬಾರಿ ಮ್ಯಾಡ್ರಿಡ್ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನಡಾಲ್ ಅವರು ಡೊಮಿನಿಕ್ ಥೀಮ್‌ರನ್ನು 7-6(10/8), 6-4 ಸೆಟ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ಜಯಿಸಿದ್ದಾರೆ.
ಈ ವರ್ಷ ಕ್ಲೇ ಕೋರ್ಟ್‌ನಲ್ಲಿ(ಆವೆಮಣ್ಣಿನ ಅಂಗಳ) 15 ಪಂದ್ಯಗಳನ್ನು ಜಯಿಸಿರುವ ನಡಾಲ್ ಮುಂದಿನ ತಿಂಗಳು ಆರಂಭವಾಗಲಿರುವ ಫ್ರೆಂಚ್ ಓಪನ್‌ನಲ್ಲಿ 10ನೆ ಪ್ರಶಸ್ತಿ ಗೆಲ್ಲಬಲ್ಲ ಫೇವರಿಟ್ ಆಟಗಾರರಾಗಿದ್ದಾರೆ.
ಈ ಗೆಲುವಿನೊಂದಿಗೆ ವಿಶ್ವ ರ್ಯಾಂಕಿಂಗ್‌ನಲ್ಲಿ ನಾಲ್ಕನೆ ಸ್ಥಾನಕ್ಕೇರಿದ್ದಾರೆ.
‘‘ನಾನು ಫಿಟ್ ಆಗಿದ್ದರೆ, ಉತ್ತಮವಾಗಿ ಆಡುವೆ, ಪ್ರಮುಖ ಪ್ರಶಸ್ತಿಗಳನ್ನು ಜಯಿಸುವ ಮೂಲಕ ಗುರಿ ತಲುಪುವ ವಿಶ್ವಾಸ ನನಗಿದೆ’’ ಎಂದು ನಡಾಲ್ ನುಡಿದರು.
ಎರಡು ವಾರಗಳ ಹಿಂದೆ ನಡೆದಿದ್ದ ಬಾರ್ಸಿಲೋನ ಓಪನ್ ಫೈನಲ್‌ನಲ್ಲಿ ಡೊಮಿನಿಕ್ ಥೀಮ್ ಅವರು ನಡಾಲ್‌ಗೆ ಶರಣಾಗಿದ್ದರು.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಮೂರು ವರ್ಷಗಳ ಬಳಿಕ ಜಯ ಸಾಧಿಸಿದ್ದ ನಡಾಲ್ ಇದೀಗ 30ನೆ ಮಾಸ್ಟರ್ಸ್ ಸಿರೀಸ್ ಪ್ರಶಸ್ತಿಯನ್ನು ಜಯಿಸಿ ಜೊಕೊವಿಕ್‌ರ ದಾಖಲೆಯನ್ನು ಸರಿಗಟ್ಟಿದ್ದಾರೆ.







