ನಿರ್ಭಯಾ ನಿಧಿಯಿಂದ 900 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ
ಹೊಸದಿಲ್ಲಿ, ಮೇ 15: ರೈಲ್ವೆ ಆವರಣಗಳಲ್ಲಿ ಭದ್ರತೆಯನ್ನು ಬಲಪಡಿಸಲು ಭಾರತೀಯ ರೈಲ್ವೆಯು ‘ನಿರ್ಭಯಾ’ ಯೋಜನೆಯಡಿ 500 ಕೋಟಿ ರೂ. ವೆಚ್ಚದಲ್ಲಿ 900ಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಗಳನ್ನು ಅಳವಡಿಸಲಿದೆ.
ಮಹಿಳೆಯರು ಸೇರಿದಂತೆ ಎಲ್ಲಾ ಪ್ರಯಾಣಿಕರಿಗೂ ಅಹರ್ನಿಶಿ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ದೇಶಾದ್ಯಂತ 983 ರೈಲು ನಿಲ್ದಾಣಗಳಲ್ಲಿ ಸುಮಾರು 19 ಸಾವಿರ ಹೈ-ಡೆಫಿನೇಶನ್ ಕ್ಯಾಮರಾಗಳನ್ನು ಅಳವಡಿಸಲು ಶೀಘ್ರವೇ ಟೆಂಡರ್‌ಗಳನ್ನು ಆಹ್ವಾನಿಸಲಾಗುವುದು. ದೇಶದಲ್ಲಿ ಮಹಿಳೆಯರ ಘನತೆ ಹಾಗೂ ಸುರಕ್ಷತೆಯನ್ನು ಖಾತರಿಪಡಿಸಲು ಸರಕಾರ ಹಾಗೂ ಎನ್‌ಜಿಒಗಳು ನಡೆಸುತ್ತಿರುವ ಉಪಕ್ರಮಗಳಿಗೆ ಕೇಂದ್ರವು ತನ್ನ 2013ರ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂ.ಗಳ ಸಂಚಿತ ನಿಧಿಯನ್ನು ಸೃಷ್ಟಿಸಿದೆ.
ಈ ಯೋಜನೆಯಡಿ ಪ್ಲಾಟ್‌ಫಾರಂಗಳು ಹಾಗೂ ನಿರೀಕ್ಷಣಾ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳನ್ನು ಸ್ಥಾಪಿಸಲಾಗುವುದು ಹಾಗೂ ತರಬೇತುಗೊಂಡ ರೈಲ್ವೆ ರಕ್ಷಣಾ ದಳದ ಸಿಬ್ಬಂದಿಯಿಂದ ನಿಯಂತ್ರಣ ಕೊಠಡಿಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿಗಾವಿರಿಸಲಾಗುವುದು. ರೈಲು ನಿಲ್ದಾಣದ ಸ್ಟೇಶನ್ ಮಾಸ್ಟರ್‌ಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ದೇಶಾದ್ಯಂತ 8 ಸಾವಿರ ರೈಲು ನಿಲ್ದಾಣಗಳಿದ್ದು, ಪ್ರಸ್ತುತ 344 ರೈಲು ನಿಲ್ದಾಣಗಳಿಗೆ ಈಗಾಗಲೇ ಸಿಸಿಟಿವಿ ಕ್ಯಾಮರಾಗಳನ್ನು ಒದಗಿಸಲಾಗಿದೆಯೆಂದು ಅವರು ಹೇಳಿದ್ದಾರೆ. ಹಂತಹಂತವಾಗಿ ದೇಶಾದ್ಯಂತ ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಅಳವಡಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದೆ. ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ಪ್ರಮುಖ ರೈಲುಗಳು ಕೂಡಾ ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆಂದು ಅವರು ಹೇಳಿದ್ದಾರೆ.





