ದೇವರ ಮೂರ್ತಿ ಹೊತ್ತು ನದಿಯಲ್ಲಿ ಮುಳುಗೆದ್ದವರು ‘ಅಸ್ಸಲಾಂ ಅಲೈಕುಂ' ಎಂದರು!
ಉ.ಪ್ರದೇಶದಲ್ಲಿ ದಲಿತರ ವಿನೂತನ ಪ್ರತಿಭಟನೆ

ಲಕ್ನೊ, ಮೇ 15: ಮೊರಾದಾಬಾದ್‌ನ ಸುಮಾರು 50 ದಲಿತ ಕುಟುಂಬದವರು ಶ್ರೀರಾಮ, ಗಣೇಶ ಮತ್ತಿತರ ದೇವರ ಮೂರ್ತಿಗಳನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ರಾಮಗಂಗಾ ನದಿಯತ್ತ ತೆರಳಿದರು. ಅಲ್ಲಿ ನದಿಯಲ್ಲಿ ಈ ಮೂರ್ತಿಗಳನ್ನು ಮುಳುಗಿಸಿಬಿಟ್ಟರು. ಬಳಿಕ ಪರಸ್ಪರ ಅಭಿನಂದಿಸುತ್ತಾ ‘ಅಸ್ಸಲಾಂ ಅಲೈಕುಂ’ ಎಂದು ಹಸ್ತಲಾಘವ ಮಾಡಿದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ದಲಿತರು ಈ ರೀತಿ ವಿರೋಧಿಸಿದರು. ಒಂದು ವೇಳೆ ದಲಿತರ ಮೇಲೆ ಇದೇ ರೀತಿ ಆಕ್ರಮಣ ಮುಂದುವರಿದರೆ ತಾವು ಇಸ್ಲಾಮಿಗೆ ಮತಾಂತರ ಹೊಂದುವುದಾಗಿ ದಲಿತರು ಎಚ್ಚರಿಕೆ ನೀಡಿದ ರೀತಿ ಇದು. ಯೋಗಿ ಸರಕಾರ ರಾಮರಾಜ್ಯದ ಭರವಸೆ ನೀಡಿತ್ತು. ಆದರೆ ಈ ಹಿಂದಿನಂತೆಯೇ ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಹಿಂದೂ ಧರ್ಮ ತ್ಯಜಿಸದೆ ನಮಗೆ ಅನ್ಯದಾರಿಯಿಲ್ಲ ಎಂದು ತಿಳಿಸಲು ಸಾಂಕೇತಿಕವಾಗಿ ಈ ರೀತಿಯ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ದಲಿತರ ಮುಖಂಡ ಲಲ್ಲಾ ಬಾಬು ತಿಳಿಸಿದ್ದಾರೆ.
ಆದರೆ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಬಿಜೆಪಿ ಮುಖಂಡ ವಿಜಯಬಹಾದುರ್ ಪಾಠಕ್ ನಿರಾಕರಿಸಿದ್ದಾರೆ.





