ಬದಿಯಡ್ಕ: ಪೊಲೀಸ್ ಠಾಣೆಯ ಮುಂದೆ ಧರಣಿ ಸತ್ಯಾಗ್ರಹ

ಮಂಜೇಶ್ವರ, ಮೇ 16: ಕುಂಬ್ಡಾಜೆ ಮಿನಿಯೂರಿನ ಅಂಗನವಾಡಿ ಶಿಕ್ಷಕಿಯಾಗಿದ್ದ ಆಯಿಷಾರ ನಿಗೂಢ ಸಾವಿನ ಕುರಿತಾದ ತನಿಖೆಯ ವಿಳಂಬವನ್ನು ವಿರೋಧಿಸಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸರ್ವಪಕ್ಷಗಳ ಧರಣಿ ಸತ್ಯಾಗ್ರಹ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್ ಉದ್ಘಾಟಿಸಿ ಮಾತನಾಡಿ, ಪೊಲೀಸ್ ಇಲಾಖೆ ಸಣ್ಣಪುಟ್ಟ ಅಪರಾಧ ಪ್ರಕರಣಗಳ ಅಪರಾಧಿಗಳನ್ನು ಮಾತ್ರ ವಶಪಡಿಸುವಲ್ಲಿ ಮಗ್ನರಾಗುತ್ತಿದ್ದು, ಆಯಿಷಾರ ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಈವರೆಗೆ ಸಾಧ್ಯವಾಗದಿರುವುದು ಇಲಾಖೆಯ ಸಾಮರ್ಥ್ಯ ಕೊರತೆಯನ್ನು ರುಜುಪಡಿಸುತ್ತದೆ. ಜಿಲ್ಲೆಯಾದ್ಯಂತ ತಲ್ಲಣಕ್ಕೆ ಕಾರಣವಾದ ಅಂಗನವಾಡಿ ಶಿಕ್ಷಕಿಯ ಅನುಮಾನಾಸ್ಪದ ಸಾವನ್ನು ಬೇಧಿಸುವಲ್ಲಿ ಪೊಲೀಸರು ಸಫಲವಾಗದಿರುವುದು ಖೇದಕರವಾಗಿದ್ದು, ಪ್ರಕರಣವನ್ನು ಕ್ರೈ ಬ್ರಾಂಚ್ ಗೆ ಹಸ್ತಾಂತರಿಸಬೇಕು ಎಂದು ಅವರು ತಿಳಿಸಿದರು.
ಕ್ರಿಯಾ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಕುಂಬ್ಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಾತಿಮತ್ ಸುಹರಾ, ಉಪಾಧ್ಯಕ್ಷ ಆನಂದ ಮವ್ವಾರು, ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಮುಖಂಡ ಎಸ್.ಎನ್.ಮಯ್ಯ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ನ್ಯಾಯವಾದಿ ಮುಹಮ್ಮದ್ ಖಾಸಿಂ, ಸುಧಾಮ ಗೋಸಾಡ, ಕರುಣಾಕರನ್, ಬಿ.ಪಿ.ಅಬ್ದುಲ್ಲ, ರವೀಂದ್ರ ರೈ ಗೋಸಾಡ, ಕೇಶವ ಪ್ರಸಾದ ನಾಣಿತ್ತಿಲು, ಎಲಿಜಬೆತ್ ಕ್ರಾಸ್ತಾ, ಗೀತಾ ಮೊದಲಾದವರು ಮಾತನಾಡಿದರು.
ಕುಟುಂಬಶ್ರೀ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡರು.
ನ. 24 ರಂದು ಆಯಿಷಾ ಏತಡ್ಕ ಸಮೀಪ ಆನೆಪಳ್ಳದಲ್ಲಿರುವ ಸ್ವಗೃಹದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ಕರೆದೊ ಯ್ಯುವ ಮಧ್ಯೆ ಕೊನೆಯುಸಿರೆಳೆದರು. ಮಾನಸಿಕ ಪೀಡನೆ ಆಯಿಷಾರ ಸಾವಿಗೆ ಕಾರಣವೆಂದು ಅನುಮಾನಪಡಲಾಗಿತ್ತು. ಓರ್ವ ಗುತ್ತಿಗೆದಾರನ ಕೈವಾಡ ಆಯಿಷಾರ ಸಾವಿನ ಹಿಂದಿದೆಯೆಂದು ಮಾತುಗಳು ಕೇಳಿಬಂದಿದ್ದವು. ಪ್ರಕರಣದ ತನಿಖೆ ಆಗ್ರಹಿಸಿ ಏತಡ್ಕದಲ್ಲಿ ಕ್ರಿಯಾ ಸಮಿತಿಗೆ ರೂಪು ನೀಡಿದ್ದರೂ ಅದು ನಿಷ್ಕ್ರೀಯವಾದ ಹಿನ್ನೆಲೆಯಲ್ಲಿ ಬಳಿಕ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಜೊತೆಯಾಗಿ ನೂತನ ಕ್ರಿಯಾ ಸಮಿತಿಗೆ ರೂಪು ನೀಡಿದರು. ಜೊತೆಗೆ ಈ ಸಾವಿನ ಪ್ರಕರಣವನ್ನು ಗುರುತಿಸುವಂತೆ ಮಹಿಳಾ ಮೋರ್ಚಾ ಬದಿಯಡ್ಕ ಪೊಲೀಸ್ ಠಾಣೆಗೆ ಮಾರ್ಚ್ ನಡೆಸಿತ್ತು. ಇದೀಗ ಕ್ರಿಯಾ ಸಮಿತಿ ಪೊಲೀಸ್ ಠಾಣೆಯ ಎದುರು ಸತ್ಯಾಗ್ರಹ ನಡೆಸಿ ಹಳ್ಳ ಹಿಡಿದಿರುವ ಪ್ರಕರಣ ತನಿಖೆಯನ್ನು ಕ್ರೈ ಬ್ರಾಂಚಿಗೆ ಹಸ್ತಾಂತರಿಸಲು ಪಟ್ಟುಹಿಡಿದಿದೆ.