ಪಡೀಲ್‌ನ ಬೈರಾಡಿ ಕೆರೆ 3.30 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ: ಶಾಸಕ ಲೋಬೊ

ಮಂಗಳೂರು, ಮೇ 16: ಪಡೀಲ್‌ನ ಬೈರಾಡಿ ಕೆರೆಯಲ್ಲಿ ಅಂತರ್ಜಲ ಕಾಪಾಡುವುದರ ಜತೆಗೆ, ಸುತ್ತಲೂ ಜಾಗಿಂಗ್ ಟ್ರಾಕ್, ಹೂತೋಟ ಹಾಗೂ ಈಜುಕೊಳ ಸಹಿತ ಒಟ್ಟು 3.30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ ಎಂದು ಶಾಸಕ ಜೆ.ಆರ್. ಲೋಬೋ ತಿಳಿಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಮಂಗಳವಾರ ಬೆಳಗ್ಗೆ ಬೈರಾಡಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಯೋಜನೆಯ ನೀಲಿ ನಕಾಶೆ ಅನಾವರಣಗೊಳಿಸಿ ಮಾತನಾಡುತ್ತಿದ್ದರು.
ಯೋಜನೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 79 ಲಕ್ಷ ರೂ. ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ 2.50 ಕೋ.ರೂ. ಮೀಸಲಿರಿಸಿ ಟೆಂಡರ್ ಕರೆಯಲಾಗಿದೆ. ಮುಂದಿನ ಒಂದೂವರೆ ತಿಂಗಳೊಳಗೆ ತಾಂತ್ರಿಕ ಅನುಮೋದನೆ ಹಾಗೂ ಟೆಂಡರ್ ಅಂತಿಮಗೊಂಡು ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು. ಆರಂಭದಲ್ಲಿ ಈ ಯೋಜನೆಯಡಿ ದೊಡ್ಡ ಪ್ರಮಾಣದ ಈಜುಕೊಳದ ಬಗ್ಗೆ ಚಿಂತನೆ ಇಲ್ಲ. ಸುರಕ್ಷಾ ವ್ಯವಸ್ಥೆಗಳೊಂದಿಗೆ ಮಕ್ಕಳಿಗೆ ಪೂರಕವಾಗಿ ಸಣ್ಣ ಪ್ರಮಾಣದ ಈಜುಕೊಳವನ್ನು ಮಾಡಲು ಯೋಜನೆ ರೂಪಿಸಲಾಗುವುದು. ಮಾತ್ರವಲ್ಲದೆ ಕೆರೆಯ ಸುತ್ತಮುತ್ತಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗುವುದು ಎಂದು ಶಾಸಕರು ಹೇಳಿದರು.
ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರಿನಲ್ಲಿರುವ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಜಲಮೂಲ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಜಪ್ಪಿನಮೊಗರು, ಕದ್ರಿಗಳಲ್ಲಿ ತಲಾ ಎರಡು ಕೆರೆಗಳು, ಬಟ್ರಕೆರೆ, ಕೆಮ್ಮಾರ್ ಕೆರೆ, ಗುಜ್ಜರಕೆರೆ ಮೊದಲಾದ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆರೆಗಳ ಅಭಿವೃದ್ಧಿಯ ಜತೆ ಸುತ್ತಮುತ್ತಲಿನ ವಾತಾವರಣವನ್ನು ಉತ್ತಮವಾಗಿಸವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ಗುಜ್ಜರ ಕೆರೆ ಅಭಿವೃದ್ಧಿಗೆ ಒಳಚರಂಡಿ ವ್ಯವಸ್ಥೆ ಮಾರಕ!
ಗುಜ್ಜರ ಕೆರೆ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಸಾಕಷ್ಟು ಹಣವನ್ನೂ ವೆಚ್ಚ ಮಾಡಲಾಗಿದೆ. ಆದರೆ ಆ ಕೆರೆಯ ಅಭಿವೃದ್ಧಿಗಿಂತಲೂ ಮುಖ್ಯವಾಗಿ ಸುತ್ತಮುತ್ತಲಿನ ಒಳಚರಂಡಿ ತ್ಯಾಜ್ಯ ನಿರ್ವಹಣೆಯೇ ಇದೀಗ ಸಮಸ್ಯೆಯಾಗಿ ತಲೆದೋರಿದೆ. ಅದಕ್ಕಾಗಿ ಪ್ರಸ್ತುತ ಸುಮಾರು ಐದು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್ ಮಾತನಾಡಿ, ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಮೂಡಾದಿಂದ ಕೆರೆ ಅಭಿವೃದ್ಧಿ ಮೂಲ ಜಲಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಇದರ ಜತೆ ಮೂಡಾದಿಂದ ಉರ್ವಾಮಾರುಕಟ್ಟೆ,ಕದ್ರಿ ಉದ್ಯಾನವನ ಅಭಿವೃದ್ಧಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಬೈರಾಡಿ ಕೆರೆ ಸಂರಕ್ಷಣಾ ಸಮಿತಿಯ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿ, ಸಮಾಜ ಮುಖಿ ಚಿಂತನೆಯೊಂದಿಗೆ ಕೆರೆ ಅಭಿವೃದ್ಧಿ ಕಾರ್ಯದಲ್ಲಿ ಸಮಿತಿಯ ಮೂಲ ಮಾದರಿ ಕೆಲಸಗಳನ್ನು ಮಾಡಲಾಗುತ್ತಿದೆ. ಬೈರಾಡಿ ಕೆರೆ ಅಭಿವೃದ್ಧಿಗೆ ಸ್ಥಳೀಯರ ಸಹಕಾರದ ಜತೆ ಸ್ಥಳೀಯ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳೂ ಕೈಜೋಡಿಸಿರುವುದು ಸಂತಸದ ವಿಚಾರ ಎಂದರು.
ವೇದಿಕೆಯಲ್ಲಿ ಉಪ ಮೇಯರ್ ರಜನೀಶ್ ಕಾಪಿಕಾಡು, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಕೇಶವ ಸನಿಲ್, ವಸಂತ್ ಬೆರ್ನಾಡ್, ಶೋಭಾ, ವಿಶ್ವಾಸ್ ಕುಮಾರ್ ದಾಸ್, ರಫೀಕ್ ಕಣ್ಣೂರು, ಮೂಡಾ ಆಯುಕ್ತ ಶ್ರೀಕಾಂತ್ ರಾವ್, ಟಿ.ಕೆ. ಸುಧೀರ್, ಅಮಿತ್ ಕಣ್ಣೂರು, ಶಶಿಕಲಾ, ಆಶಾ ಡಿಸಿಲ್ವಾ, ಕೇಶವ ಮರೋಳಿ, ಮೋಹನ್ ಪಡೀಲ್, ನಮಿತಾ ಡಿ. ರಾವ್, ಜಿನ್ನಪ್ಪ, ಚಂದಪ್ಪ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಮನಪಾ ಸದಸ್ಯ ಪ್ರಕಾಶ್ ಬಿ. ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಡೆನ್ನಿಸ್ ಡಿಸಿಲ್ವಾ ವಂದಿಸಿದರು.
ಕೆರೆಗೆ ತ್ಯಾಜ್ಯ ಬಿಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ಕಳೆದ ಎರಡು ವರ್ಷಗಳಿಂದ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಸ್ಥಳೀಯರ ನೇತೃತ್ವದಲ್ಲಿ ನಡೆಯುತ್ತಿದೆ. ವಿವಿಧ ಸಂಘ ಸಂಸ್ಥೆಗಳೂ ಈಕಾರ್ಯದಲ್ಲಿ ಕೈಜೋಡಿಸಿವೆ. ಹಾಗಿದ್ದರೂ ಕೆರೆಗೆ ತ್ಯಾಜ್ಯ ಬರುತ್ತಿರುವ ಲಕ್ಷಣ ಕಾಮುತ್ತಿದೆ. ಹಾಗಾಗಿ ಅಭಿವೃದ್ದಿ ಯೋಜನೆ ಆರಂಭಗೊಂಡ ಬಳಿಕ ತ್ಯಾಜ್ಯ ಬರದಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ತ್ಯಾಜ್ಯ ಬಿಡುವವರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಕ್ರಮ ವಹಿಸಲಾಗುವುದು ಎಂದ ಶಾಸಕ ಜೆ.ಆರ್. ಲೋಬೋ ಸೂಚನೆ ನೀಡಿದರು.







