ಸ್ವಾತಂತ್ರ ಹೋರಾಟಗಾರ, ಹಿರಿಯ ಮುತ್ಸದ್ದಿ ಶಿವಪ್ಪ ಗಂಗೊಳ್ಳಿ ನಿಧನ

ಶಿಕಾರಿಪುರ, ಮೇ 16: ಸ್ವಾತಂತ್ರ ಹೋರಾಟಗಾರ, ಸಮಾಜವಾದಿ ಚಳುವಳಿಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಹಿರಿಯ ಮುತ್ಸದ್ದಿ ಶಿವಪ್ಪ ಗಂಗೊಳ್ಳಿ (95) ಅನಾರೋಗ್ಯದಿಂದಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪಟ್ಟಣದ ಪ್ರತಿಷ್ಟಿತ ದಿ.ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ, ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಶಿವಪ್ಪ ಅವರು ಸಮಾಜವಾದಿ ಹೋರಾಟಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು.
ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್ ಪಟೇಲ್, ಶಾಂತವೇರಿ ಗೋಪಾಲ ಗೌಡರ ನಿಕಟವರ್ತಿಯಾಗಿದ್ದ ಶಿವಪ್ಪರವರು ತಾಲೂಕು ರೈತ ಸಂಘದ ಅಧ್ಯಕ್ಷರಾಗಿ ಹಲವು ವರ್ಷ ರೈತ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.
ಶಾಸಕ ರಾಘವೇಂದ್ರ ದೂರವಾಣಿ ಮೂಲಕ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು. ಮಾಜಿ ಶಾಸಕ ಶಾಂತವೀರಪ್ಪಗೌಡ, ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ, ಜಿ.ಪಂ ಮಾಜಿ ಉಪಾಧ್ಯಕ್ಷ ಎನ್.ಅರುಣ, ತಟ್ಟೆಹಳ್ಳಿ ಮಹಾದೇವಪ್ಪ, ನಿಜಲಿಂಗಪ್ಪಗೌಡ, ಕೆ.ಹಾಲಪ್ಪ ಮತ್ತಿತರ ಹಲವು ಮುಖಂಡರು ಅಂತಿಮ ದರ್ಶನ ಪಡೆದರು.





