ಅಪಘಾತ: ಬೈಕ್‌ನಲ್ಲಿದ್ದ ಸಹೋದರರು ಮೃತ್ಯು; ಹೊತ್ತಿ ಉರಿದ ಬಸ್

ಶಿವಮೊಗ್ಗ, ಮೇ 16: ಶಿವಮೊಗ್ಗ ತಾಲೂಕಿನ ವೀರಣ್ಣನ ಬೆನವಳ್ಳಿ ಗ್ರಾಮದ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಸಹೋದರರು ಮೃತಪಟ್ಟಿದ್ದು, ಈ ವೇಳೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಹಾಗೂ ಬೈಕ್ ಸುಟ್ಟು ಕರಕಲಾಗಿರುವ ಘಟನೆ ವರದಿಯಾಗಿದೆ.
ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅದರಲ್ಲಿದ್ದ ಪ್ರಯಾಣಿಕರೆಲ್ಲರೂ ಇಳಿದಿದ್ದು, ಇದರಿಂದ ಬಸ್‌ನಲ್ಲಿದ್ದವರಿಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಶಿವಮೊಗ್ಗದ ಹರಿಗೆ ಗ್ರಾಮದ ನಿವಾಸಿಗಳಾದ ಜಗದೀಶ್ (34) ಹಾಗೂ ಅವರ ಸಹೋದರ ಲೋಕೇಶ್ (28) ಅಪಘಾತದಲ್ಲಿ ಮೃತರು ಎಂದು ಗುರುತಿಸಲಾಗಿದೆ. ಶ್ರೀನಿವಾಸ ಎಂಬ ಹೆಸರಿನ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಉಂಟಾಗಿದೆ ಎಂದು ದೂರಲಾಗಿದೆ.
ಜಗದೀಶ್ ರಿಗೆ ಕಳೆದ ಎರಡು ತಿಂಗಳ ಹಿಂದೆ ಮಗು ಜನಿಸಿದ್ದು, ಪತ್ನಿಯ ತವರು ಮನೆಯಿರುವ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ಸೋಮವಾರ ನಾಮಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಗದೀಶ್ ಹಾಗೂ ಲೋಕೇಶ್ ಭಾಗವಹಿಸಿ ವಾಪಸ್ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





