2 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡಿದ ಶಿಕ್ಷಕರಿಗೆ 61 ಲಕ್ಷ ರೂ. ದಂಡ: ಕಾರಣವೇನು ಗೊತ್ತೇ?

ಪಾಟ್ನಾ, ಮೇ 16: ಮಕ್ಕಳಿಗೆ ಬಿಸಿಯೂಟ ಹಾಕಿದ ಕಾರಣಕ್ಕಾಗಿ ಸುಮಾರು 251 ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ 61.68 ಲಕ್ಷ ರೂ. ದಂಡ ವಿಧಿಸಿದ ಘಟನೆ ನಡೆದಿದೆ. ಸರಕಾರದ ಯೋಜನೆಯಾದ ಬಿಸಿಯೂಟ ನೀಡಿದ್ದಕ್ಕಾಗಿ ದಂಡ ವಿಧಿಸುವುದು ಯಾವ ನ್ಯಾಯ ಎಂದು ನೀವು ಯೋಚಿಸುವುದಾದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಬೇಕು. ಅಷ್ಟಕ್ಕೂ ಈ ಮುಖ್ಯೋಪಾಧ್ಯಾಯರು ಬಿಸಿಯೂಟ ನೀಡಿರುವುದು ಶಾಲೆಗೆ ಬರುತ್ತಿದ್ದ ಮಕ್ಕಳಿಗಲ್ಲ. ಬದಲಾಗಿ, ಶಾಲೆಯಲ್ಲೇ ಇಲ್ಲದ, ಹುಟ್ಟಿಯೇ ಇಲ್ಲದ ಸುಮಾರು 2 ಲಕ್ಷ ವಿದ್ಯಾರ್ಥಿಗಳಿಗೆ.
ವಾರ್ಷಿಕ ಖರ್ಚುವೆಚ್ಚಗಳನ್ನು ಲೆಕ್ಕ ಮಾಡುವಾಗ ಈ ಅಕ್ರಮ ಬೆಳಕಿಗೆ ಬಂದಿದ್ದು, 251 ಶಾಲೆಗಳ ಮುಖ್ಯೋಪಾಧ್ಯಾಯರಿಗೆ ದಂಡ ವಿಧಿಸಲಾಗಿದೆ. ಇವರಲ್ಲಿ 70 ಶೇ. ಮಂದಿ ಈಗಾಗಲೇ ದಂಡ ಪಾವತಿಸಿದ್ದಾರೆ ಎಂದು ಡಿಪಿಒ ಸುಭಾಶ್ ಗುಪ್ತಾ ಹೇಳಿದ್ದಾರೆ.
“ಬಿಸಿಯೂಟ ನೀಡಲಾಗಿದೆ ಎನ್ನಲಾಗಿದ್ದ 2 ಲಕ್ಷ ವಿದ್ಯಾರ್ಥಿಗಳು ಇದುವರೆಗೂ ಶಾಲೆಗೆ ಬಂದೇ ಇಲ್ಲ. ಕೆಲವರು ಇನ್ನೂ ಹುಟ್ಟಿಯೇ ಇರಲಾರರು. ಮತ್ತೆ ಕೆಲವರು ಬೇರೆಡೆಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರಬಹುದು” ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.







