ಸಾಲ ಮನ್ನಾ ಆಗ್ರಹಿಸಿ ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು, ಮೇ 16: ರೈತರ ಎಲ್ಲ ಹಂತದ ಸಾಲವನ್ನು ಸರಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ವೌರ್ಯ ವೃತ್ತದ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಕೆ.ಎಸ್.ಪುಟ್ಟಣಯ್ಯ, ರಾಜ್ಯದಲ್ಲಿ ಕಳೆದ 11 ವರ್ಷಗಳಿಂದ ನಿರಂತರ ಬರಗಾಲ ಕಾಡುತ್ತಿದೆ. ರೈತರು, ರೈತ ಕಾರ್ಮಿಕರು ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಜೀವನ ನಡೆಸುವುದು ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಕಾಪಾಡಿಕೊಳ್ಳಲಾಗದೆ ತೀರಾ ಕಷ್ಟದ ಸ್ಥಿತಿಯಲ್ಲಿ ನಲುಗುತ್ತಿದ್ದಾರೆ. ಆದುದರಿಂದ ಸರಕಾರ ಇದನ್ನು ಮನಗಂಡು ಕೂಡಲೇ ರೈತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಆತ್ಮಹತ್ಯೆಯಲ್ಲಿ 2ನೇ ಸ್ಥಾನ: ಗ್ರಾಮೀಣ ಪ್ರದೇಶದಲ್ಲಿ ರೈತರು ಮಾಡಿರುವ ಸಾಲಗಳನ್ನು ತೀರಿಸಲು ನಗರ, ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಹಲವಾರು ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದುವರೆಗೂ 57 ಸಾವಿರಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯದಲ್ಲಿ, ರೈತರ ಆತ್ಮಹತ್ಯೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೀಗಿದ್ದರೂ ಬ್ಯಾಂಕುಗಳು ಬಲವಂತವಾಗಿ ರೈತರಿಂದ ಸಾಲ ವಸೂಲಿ ಮಾಡುತ್ತಿವೆ. ಇಷ್ಟೇ ಅಲ್ಲದೆ, ರೈತರ ಸ್ಥಿರಾಸ್ತಿ ಮುಟ್ಟುಗೋಲು, ಚರಾಸ್ತಿ ಜಪ್ತಿ ಹಾಗೂ ಜೈಲಿಗೆ ಹಾಕುವ ಹೀನ ಕೃತ್ಯಕ್ಕೆ ಮುಂದಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಬಂಡವಾಳಶಾಹಿ, ಕಾರ್ಪೋರೇಟ್ ಕಂಪೆನಿಗಳ ಸಾವಿರಾರು ಕೋಟಿ ರೂ.ಗಳ ಸಾಲ ಮನ್ನಾ ಮಾಡುವ ಕೇಂದ್ರ ಸರಕಾರ, ರೈತರು ಮಾಡಿರುವ ಅಲ್ಪ ಮೊತ್ತದ ಸಾಲ ಮನ್ನಾ ಮಾಡಲು ಹಿಂಜರಿಯುತ್ತಿದೆ. ಅಲ್ಲದೆ, ರೈತರ ಸಾಲ ಮನ್ನಾ ಮಾಡಿದರೆ ದಿವಾಳಿಯಾಗುತ್ತದೆ ಎಂದು ಆರ್‌ಬಿಐ ಗವರ್ನರ್ ಬಿಂಬಿಸುತ್ತಿರುವುದು ದೇಶದ ಆರ್ಥಿಕ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.
ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ರೈತರ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ ಬಿಜೆಪಿ ಇದೀಗ ಇಬ್ಬಂದಿತನ ತೋರಿದೆ. ತಮಿಳುನಾಡಿನ ರೈತರು ದೆಹಲಿಯಲ್ಲಿ ತಿಂಗಳುಗಟ್ಟಲೆ ವಿವಿಧ ರೀತಿಯ ಚಳವಳಿ ನಡೆಸುತ್ತಿದ್ದರೂ ಅವರನ್ನು ಕ್ಯಾರೇ ಎನ್ನುವವರೇ ಇಲ್ಲ. ರಾಜ್ಯ ಸರ್ಕಾರ ಕೂಡ ಸಾಲ ಮನ್ನಾ ಮಾಡಲು ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುವ ಮೂಲಕ ಪಲಾಯನವಾದ ಮಾಡುತ್ತಿದೆ. ಬರ ನಿರ್ವಹಣೆಯಲ್ಲಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಆರೋಪಿದರು. ಪ್ರತಿಭಟನೆಯಲ್ಲಿ ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ, ಭ್ರಷ್ಟಾಚಾರ ತಡೆ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ರೈತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವಾರು ‘ಭಾಗ್ಯ’ಗಳನ್ನು ಘೋಷಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಭಾಗ್ಯ ಏಕೆ ಘೋಷಣೆ ಮಾಡುತ್ತಿಲ್ಲ. ರಾಜ್ಯದಲ್ಲಿ ರೈತರ ಸ್ಥಿತಿ ತೀರಾ ಹದಗೆಟ್ಟಿದ್ದು, ಮೊದಲು ಮುಖ್ಯಮಂತ್ರಿಗಳು ಇದನ್ನು ಅರ್ಥ ಮಾಡಿ ಕೊಳ್ಳಬೇಕು.
-ಎಸ್.ಆರ್. ಹಿರೇಮಠ, ಸಮಾಜ ಪರಿವರ್ತನಾ ವೇದಿಕೆ ಅಧ್ಯಕ್ಷ







