ಖಾದಿ ಉತ್ಸವ: 25 ದಿನಗಳಲ್ಲಿ 20 ಕೋಟಿ ರೂ. ವಹಿವಾಟು: ಯಲುವನಹಳ್ಳಿ ರಮೇಶ್
ಬೆಂಗಳೂರು, ಮೇ 16: ನಗರದ ಸ್ವಾತಂತ್ರ ಉದ್ಯಾನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿರುವ ರಾಷ್ಟ್ರಮಟ್ಟದ ಖಾದಿ ಉತ್ಸವದಲ್ಲಿ 25 ದಿನಗಳಲ್ಲಿ 20 ಕೋಟಿ ರೂ.ವಹಿವಾಟು ನಡೆದಿದೆ ಎಂದು ಮಂಡಳಿ ಅಧ್ಯಕ್ಷ ಯಲುವನಹಳ್ಳಿ ಎನ್.ರಮೇಶ್ ತಿಳಿಸಿದ್ದಾರೆ.
ಮಂಗಳವಾರ ಸ್ವಾತಂತ್ರ ಉದ್ಯಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾದಿ ಉತ್ಸವ ಆರಂಭವಾಗಿ 25 ದಿನಗಳಲ್ಲಿ 20 ಕೋಟಿ ರೂ.ವಹಿವಾಟು ನಡೆದಿದೆ. ಮೇ 23ರ ವರೆಗೆ ಉತ್ಸವ ನಡೆಯಲಿದ್ದು, ಇನ್ನೂ 6ಕೋಟಿ ರೂ.ಗಳಷ್ಟು ವಹಿವಾಟಿನ ನಿರೀಕ್ಷೆಯಿದೆ ಎಂದರು.
ಉತ್ಸವದಲ್ಲಿ ದೇಶದ 16 ರಾಜ್ಯಗಳ ಖಾದಿ ಉತ್ಪನ್ನಗಳ ಮಾರಾಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. 210 ಮಳಿಗೆಗಳನ್ನು ತೆರೆಯಲಾಗಿದ್ದು, ಒಟ್ಟು 300ಕ್ಕೂ ಅಧಿಕ ಖಾದಿ ಉತ್ಪನ್ನಗಳನ್ನು ಮಾರಾಟಕ್ಕಿಡಲಾಗಿದೆ. ಉತ್ಸವದಲ್ಲಿ ರಿಯಾಯಿತಿ ದರದಲ್ಲಿ ಖಾದಿ ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ಚರ್ಮದ ಉತ್ಪನ್ನಗಳು, ಜೇನು ತುಪ್ಪ, ಬೆಟ್ಟದ ನೆಲ್ಲಿಕಾಯಿ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ವಲಯ ಮಟ್ಟದಲ್ಲಿ 10 ದಿನಗಳ ಕಾಲ ಖಾದಿ ಉತ್ಸವ ಏರ್ಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಶಿವಮೊಗ್ಗ, ಮಂಡ್ಯ, ರಾಯಚೂರು ಜಿಲ್ಲೆಗಳಲ್ಲಿ ವಸ್ತು ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗುವುದು. ವಲಯವಾರು ಮೇಳಕ್ಕೆ ರಾಜ್ಯ ಉತ್ಸವಕ್ಕೆ ತಲಾ ಎರಡು ಕೋಟಿ ರೂ.ಗಳನ್ನು ಅನುದಾನ ನೀಡಿದೆ ಎಂದು ತಿಳಿಸಿದರು.
ಉಪ ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಹರಿಶ್ಚಂದ್ರ ಮಾತನಾಡಿ, ಉತ್ಸವ ಆಯೋಜನೆ ವಿಳಂಬವಾಗಿರುವುದರಿಂದ ಕಳೆದ ವರ್ಷಕ್ಕಿಂತ ಈ ಬಾರಿ ಉತ್ಸವಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕಳೆದ ಬಾರಿ 1.25 ಲಕ್ಷ ಜನರು ಭೇಟಿ ನೀಡಿದ್ದರು. ಆದರೆ ಈ ಬಾರಿ ಕೇವಲ 45 ಸಾವಿರ ಮಂದಿಯಷ್ಟೇ ಭೇಟಿ ನೀಡಿದ್ದಾರೆ. ಆದರೆ ಖರೀದಿದಾರರ ಸಂಖ್ಯೆ ಕ್ಷೀಣಿಸಿಲ್ಲ. ಮುಂದಿನ ವರ್ಷ ಉತ್ಸವವನ್ನು ಬೃಹತ್ ಮಟ್ಟದಲ್ಲಿ ನಡೆಸಲು ಸ್ವಾತಂತ್ರ ಉದ್ಯಾನದಿಂದ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಶೀಘ್ರದಲ್ಲಿ ಖಾದಿ ಪ್ಲಾಝಾ ನಿರ್ಮಾಣ
ಬೆಳಗಾವಿ ಮತ್ತು ಬೆಂಗಳೂರು ನಗರದಲ್ಲಿ ಖಾದಿ ಪ್ಲಾಝಾ ನಿರ್ಮಾಣಕ್ಕೆ ಸರಕಾರ ತಲಾ 10 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಶೀಘ್ರದಲ್ಲೇ ಪ್ಲಾಝಾಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ನಗರದಲ್ಲಿ ಖಾದಿ ಪ್ಲಾಝಾ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ಅಗತ್ಯ ವಿದ್ದು, ಜಿಲ್ಲಾಡಳಿತ ಸ್ಥಳಾವಕಾಶ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಖಾದಿ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿ ಖಾದಿ ಸಾಮೂಹಿಕ ಸೌಲಭ್ಯ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಒಂದೇ ಸೂರಿನಡಿ ಖಾದಿ ಕಚ್ಚಾ ವಸ್ತು, ಖಾದಿ ವಸ್ತ್ರ ತಯಾರಿಕೆ ಮತ್ತು ಮಾರಾಟ ಮೂರು ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಖಾದಿ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಮತ್ತು ವಿದೇಶೀ ಸಿದ್ಧ ಉಡುಪುಗಳಿಗೆ ಸೆಡ್ಡು ಹೊಡೆಯುವಂತಹ ನೂತನ ಉಡುಪು ‘ಖಾದಿ ಜೀನ್ಸ್’ ಸದ್ಯದಲ್ಲೇ ಪರಿಚಯಿಸಲಾಗುವುದು.
-ಯಲುವನಹಳ್ಳಿ ಎನ್.ರಮೇಶ್, ಅಧ್ಯಕ್ಷ ಖಾದಿ ಮಂಡಳಿ







