ತಲೆಗೆ ಬ್ಯಾಟ್‌ನಿಂದ ಪೆಟ್ಟು , ಕ್ರಿಕೆಟಿಗ ಬಲಿ

ಹೈದರಾಬಾದ್, ಮೇ 16: ತಲೆಗೆ ಬ್ಯಾಟ್ ಬಡಿದ ಪರಿಣಾಮವಾಗಿ ಯುವ ಕ್ರಿಕೆಟಿಗನೊಬ್ಬ ಬಲಿಯಾದ ಘಟನೆ ಬಹಾದುರ್‌ಪುರದಲ್ಲಿ ರವಿವಾರ ನಡೆದಿದೆ.
ಸ್ಥಳೀಯ ಎರಡು ತಂಡಗಳ ನಡುವಿನ ಸೌಹಾರ್ಧ ಪಂದ್ಯದಲ್ಲಿ 21ರ ಹರೆಯದ ಆಟಗಾರ ವಜೀದ್ ಅವರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ.
ಮಿರ್ ಆಲಮ್ ಈದ್ಗಾ ಸ್ಟೇಡಿಯಂನಲ್ಲಿ ಆಟವಾಡುತ್ತಿದ್ದಾಗ ಎದುರಾಳಿ ತಂಡದ ದಾಂಡಿಗ ಚೆಂಡಿಗೆ ಬೀಸಿದ ಬ್ಯಾಟ್ ಫೀಲ್ಡಿಂಗ್ ನಿರತ ವಜೀದ್ ತಲೆಗೆ ಬಡಿದಿದೆ. ತಲೆಗೆ ಬಿದ್ದ ಪೆಟ್ಟಿನಿಂದ ವಜೀದ್ ಅವರು ಕಲ್ಲುಗಳನ್ನು ಬಳಸಿ ನಿರ್ಮಿಸಲಾದ ವಿಕೆಟ್( ಸ್ಟಂಪ್) ಮೇಲೆ ಕುಸಿದು ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ಇನ್ನಷ್ಟು ಪೆಟ್ಟಾಗಿದೆ ಎಂದು ಮೂಲಗಳು ತಿಳಿಸಿವೆ.
ವಜೀದ್ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಇನ್ನೊಂದು ಮೂಲಗಳ ಪ್ರಕಾರ ಅವರು ಕ್ಯಾಚ್ ಪಡೆಯಲು ಓಡುತ್ತಿದ್ದಾಗ ಅವರ ತಲೆಗೆ ಇನ್ನೊಂದು ತಂಡದ ದಾಂಡಿಗ ಬೀಸಿದ ಬ್ಯಾಟ್ ಬಡಿದು ಅವರು ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ವಜೀದ್ ಅವರನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಬಹಾದೂರ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





