ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಹಾನಿ ಸಲ್ಲ: ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ

ಉಡುಪಿ, ಮೇ 16: ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಹಾನಿ ಉಂಟು ಮಾಡುವುದು ಸರಿಯಲ್ಲ. ನಾವು ಎಲ್ಲ ಸೇರಿ ಸಮರ್ಥ, ಸಶಕ್ತ ಹಾಗೂ ಆರೋಗ್ಯಕರ ಭಾರತವನ್ನು ಕಟ್ಟುವ ಕೆಲಸ ಮಾಡಬೇಕೆಂದು ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ರಾಜ್ಯಪಾಲ ಕೆ.ಪದ್ಮನಾಭ ಆಚಾರ್ಯ ಹೇಳಿದ್ದಾರೆ.
ಉಡುಪಿ ಪರ್ಯಾಯ ಪೇಜಾವರ ಮಠದ ವತಿಯಿಂದ ಶ್ರೀಕೃಷ್ಣ ಮಠದ ಅಷ್ಟೋತ್ತರ ಸಹಸ್ರ ರಜತಕಲಶ ಸಹಿತ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಠದ ರಾಜಾಂಗಣದಲ್ಲಿ ಮಂಗಳವಾರ ನಡೆದ ಧರ್ಮಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಈಶಾನ್ಯದ ಎಂಟು ರಾಜ್ಯಗಳು ಭಾರತದಲ್ಲಿದ್ದರೂ ಅಲ್ಲಿಯ ಜನತೆಗೆ ತಾವು ಪರಕೀಯರೆಂಬ ನೋವು ಕಾಡುತ್ತಿದೆ. ಅವರ ಕಷ್ಟಗಳಲ್ಲಿ ಸ್ಪಂದಿಸುವ ಕೆಲಸ ವನ್ನು ನಾವು ಮಾಡಬೇಕು. ಅವಕಾಶ ವಂಚಿತರಿಗೆ ಮೊದಲ ಆದ್ಯತೆಯನ್ನು ಕಲ್ಪಿಸಬೇಕಾಗಿದೆ. ಈ ರಾಜ್ಯಗಳಲ್ಲಿನ ಬಡತನ, ಅಸಮಾನತೆ, ನಿರ್ಲಕ್ಷ ಮನೋ ಭಾವ ನಿವಾರಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಇಂದು ಭಾರತದ ಸಮಗ್ರತೆ ಅಪಾಯದಲ್ಲಿದೆ. ಈಶಾನ್ಯದ ಎಂಟು ರಾಜ್ಯ ಗಳ ಶೇ. 98ರಷ್ಟು ಪ್ರದೇಶವು ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿದೆ. ನಮ್ಮ ರಾಷ್ಟ್ರೀಯತೆಯನ್ನು ಇನ್ನಷ್ಟು ಸಧೃಡಗೊಳಿಸುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ದೇವಸ್ಥಾನಗಳ ಜೀರ್ಣೋದ್ಧಾರವು ಸಮಾಜದ ಬೆಳವಣಿಗೆಗೆ ಪೂರಕವಾಗಿದೆ. ಹೀಗೆ ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಶ್ರದ್ಧೆಗಳ ಕ್ರಾಂತಿ ಆಗುತ್ತಿದೆ ಎಂದು ಹೇಳಿದರು.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಮಾತನಾಡಿ, ನೆಮ್ಮದಿಯ ಬದುಕಿಗೆ ಆಧ್ಯಾತ್ಮ ಮುಖ್ಯ. ಮಾನವೀಯತೆ ಹಾಗೂ ಸಂಸ್ಕಾರದ ನೆಲೆಯಲ್ಲಿ ಸಾಗುತ್ತಿರುವ ಭಾರತವನ್ನು ನಾವು ಉಳಿಸಬೇಕಾಗಿದೆ. ಯುವಜನತೆ ದೇಶದಲ್ಲಿನ ಸಮಸ್ಯೆ ಬಗೆಹರಿಸಬೇಕೆ ಹೊರತು ಸಮಸ್ಯೆ ಸೃಷ್ಠಿಸಬಾರದು ಎಂದರು.
ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ವಹಿಸಿದ್ದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪ್ರಯಾಗ ಶ್ರೀವಿದ್ಯಾತ್ಮತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ವಿದ್ವಾನ್ ವಿಜಯೀಂದ್ರಾಚಾರ್ ಉಪನ್ಯಾಸ ನೀಡಿದರು. ವಾಸುವೇದ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಹೊರೆಕಾಣಿಕೆ ಹಾಗೂ ರಜತ ಕಶಲಗಳನ್ನು ಹೊತ್ತ ಶೋಭಾಯಾತ್ರೆ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ನಡೆಯಿತು.