ಲಾರಿ-ಬೈಕ್ ಢಿಕ್ಕಿ: ಹಿಂಬದಿ ಸವಾರ ಸಾವು

ಅಂಕೋಲಾ, ಮೇ 16: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 66ರ ಜಮಗೋಡ ರೈಲು ನಿಲ್ದಾಣ ಕ್ರಾಸ್ ರಸ್ತೆ ಸಮೀಪ ಬೈಕ್‌ಗೆ ಹಿಂದಿನಿಂದ ಬಂದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ 6:30ರ ಸುಮಾರಿಗೆ ನಡೆದಿದೆ. ತಾಲೂಕಿನ ಬೆಳಂಬಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ಯ ಖಾರ್ವಿವಾಡ ಗ್ರಾಮದ ಯುವಕ ಶ್ರೀಧರ ಷಣ್ಮುಖ ಖಾರ್ವಿ (30) ಎಂಬಾತನೇ ಮೃತಪಟ್ಟ ಬೈಕ್‌ನ ಸಹಸವಾರ ಎಂದು ಗುರುತಿಸಲಾಗಿದೆ.
ಅದೇ ಗ್ರಾಮದ ರಾಜೇಶ ಬಿ. ಖಾರ್ವಿ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಇವರು ಮಂಗಳೂರಿನ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಅಂಕೋಲಾ ರೈಲು ನಿಲ್ದಾಣಕ್ಕೆ ಬೈಕ್ ಮೇಲೆ ಹೊರಟಿದ್ದ ಸಂದರ್ಭ ಈ ಅವಘಡ ನಡೆದಿದೆ ಎನ್ನಲಾಗಿದೆ. ಪಿಎಸ್ಸೈ ಎಚ್.ಓಂಕಾರಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕ ಸಂಕೇಶ್ವರ ಹುಕ್ಕೇರಿ ಮೂಲದ ಮನ್ಸೂರ್ ಅಹ್ಮದ್ ಮುಲ್ಲಾ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಶ್ರೀಧರ ಖಾರ್ವಿ ಓರ್ವ ವಿಕಲಚೇತನ ವ್ಯಕ್ತಿಯಾಗಿದ್ದು, ಸಮಾಜಸೇವೆಯ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ. ತನ್ನ ಪರಿಚಿತರು ಹಾಗೂ ವಿಕಲಚೇತನರು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸುವುದಲ್ಲದೆ, ಅವರೊಂದಿಗೆ ಆಸ್ಪತ್ರೆಯಲ್ಲಿದ್ದು ವೈದ್ಯಕೀಯ ಆರೈಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.





