25 ಕೋಟಿ ರೂ.ವೆಚ್ಚದ ಹೈಟೆಕ್ ಬಸ್‌ನಿಲ್ದಾಣ: ಸಚಿವ ಆಂಜನೇಯ

ಚಿತ್ರದುರ್ಗ, ಮೇ 16: ನಗರದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಬಸ್‌ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಮುಖ್ಯಮಂತ್ರಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಳಾಗಿರುವ ರಸ್ತೆಗಳಿಗೆ ಮುಕ್ತಿ ನೀಡುವ ಸಲುವಾಗಿ ಶೀಘ್ರದಲ್ಲಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು. ನಗರೋತ್ಥಾನ ಯೋಜನೆಯಡಿ ನಗರದಲ್ಲಿ ನೂತನ ರಸ್ತೆಗಳನ್ನು ನಿರ್ಮಿಸಲಾಗುವುದು.
ಅಲ್ಲದೆ ಹಾಳಾದ ರಸ್ತೆಗಳನ್ನು ಸರಿಪಡಿಸಲು ಸಭೆ ಕರೆಯಲಾಗುವುದು. ಇದರ ಬಗ್ಗೆ ಚರ್ಚಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಸ್ತೆ ದುರಸ್ಥಿಗೆ ಎಸ್‌ಇಪಿ-ಟಿಎಸ್‌ಪಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. 1931 ಅಂದರೆ, ಬ್ರಿಟಿಷರ ಕಾಲದಲ್ಲಿ ಜಾತಿಗಣತಿಯಾಗಿದ್ದು, ಇದುವರೆಗೆ ಮತ್ತೆ ಜಾತಿಗಣತಿ ಆಗಿರಲಿಲ್ಲ.
ದೇಶದಲ್ಲಿಯೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಆರ್ಥಿಕ ಮತ್ತು ಸಾಮಾಜಿಕ ಜನಗಣತಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಗಣತಿ ಕಾರ್ಯ ಪೂರ್ಣಗೊಂಡಿದ್ದು, ಆಯೋಗದ ಅಧ್ಯಕ್ಷರು ಯಾವಾಗ ವರದಿ ಸಲ್ಲಿಸುತ್ತಾರೆ ಎಂಬುವುದರ ಕುರಿತು ಸಿಎಂ ಜೊತೆ ಚರ್ಚಿಸಿ, ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಗಣತಿ ವರದಿ ಸೋರಿಕೆಯಾಗಿಲ್ಲ.
ಇದುವರೆಗೆ ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು. 2011ರ ಜನಗಣತಿ ಮಾಹಿತಿ ಆಧರಿಸಿ ಯಾವ್ಯಾವ ಜಾತಿ ಎಷ್ಟೇಷ್ಟು ಎಂಬುದನ್ನು ಬರೆದಿರಬಹುದು. ಆದರೆ, ಆಯೋಗ ನೀಡುವ ವರದಿಯೇ ಅಧಿಕೃತ ಎಂದು ಹೇಳಿದರು. ರಾಜಕೀಯವಾಗಿ ಪರಿಶಿಷ್ಟ ಜಾತಿ ಪಂಗಡದವರೆಗೆ ಮೀಸಲಾತಿ ದೊರಕಿದೆ. ಆದರೆ, ಉದ್ಯೋಗದಲ್ಲಿ ಮಿಸಲಾತಿ ಹೆಚ್ಚಾಗಬೇಕಾದ ಅನಿವಾರ್ಯತೆ ಎಂದರು.
ಮತಯಾಚನೆಯ ಉದ್ದೇಶದಿಂದ ಯಡಿಯೂರಪ್ಪ ದಲಿತರ ಮನೆಯಲ್ಲಿ ಭೋಜನ ಮಾಡಲಾರಂಭಿಸಿದ್ದಾರೆ. ದಲಿತರ ಮನೆಯಲ್ಲಿ ಊಟ ಮಾಡುವ ಬದಲು, ದಲಿತರ ಮೇಲೆ ದೌರ್ಜನ್ಯ, ಬಹಿಷ್ಕಾರ, ಅಸ್ಪಶ್ಯತೆ ಆಚರಿಸುವ ಸ್ಥಳಗಳಿಗೆ ಭೇಟಿ ನೀಡಿ, ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ಮೂಡಿಸಲಿ. -ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ







