ಮೆಸ್ಸಿ ವಿಶ್ವಕಪ್ ಗೆಲ್ಲುತ್ತಾರೆ: ಪುಯೊಲ್ ವಿಶ್ವಾಸ

ಹೊಸದಿಲ್ಲಿ, ಮೇ 16: ತನ್ನ ಬಾರ್ಸಿಲೋನದ ಸಹ ಆಟಗಾರ ಲಿಯೊನೆಲ್ ಮೆಸ್ಸಿ ಅರ್ಜೆಂಟೀನ ತಂಡದ ಪರ ವಿಶ್ವಕಪ್ ಜಯಿಸುವ ದಿನಗಳು ಇನ್ನು ಹೆಚ್ಚು ದೂರವಿಲ್ಲ ಎಂದು ಸ್ಪೇನ್‌ನ ಫುಟ್ಬಾಲ್ ದಂತಕತೆ ಕಾರ್ಲ್ಸ್ ಪುಯೊಲ್ ಅಭಿಪ್ರಾಯಪಟ್ಟಿದ್ದಾರೆ.
ಅರ್ಜೆಂಟೀನದ ಸ್ಟಾರ್ ಆಟಗಾರನಾಗಿರುವ ಮೆಸ್ಸಿ ಈತನಕ ವಿಶ್ವಕಪ್ ಜಯಿಸಲು ವಿಫಲರಾಗಿದ್ದಾರೆ. ವಿಶ್ವಕಪ್ ವಿಜೇತ ನಾಯಕನಾಗಿರುವ ಪುಯೊಲ್ ಮುಂಬರುವ ಫಿಫಾ ಅಂಡರ್-17 ವಿಶ್ವಕಪ್‌ನ ಪ್ರಚಾರದ ನಿಮಿತ್ತ ಭಾರತ ಪ್ರವಾಸದಲ್ಲಿದ್ದಾರೆ.
‘‘ಮೆಸ್ಸಿ ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮೆಸ್ಸಿ ಆದಷ್ಟು ಬೇಗನೆ ಅರ್ಜೆಂಟೀನದ ಪರ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವುದು ಖಚಿತ. ರಿಯಲ್ ಮ್ಯಾಡ್ರಿಡ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಮೆಸ್ಸಿ ಇಬ್ಬರೂ ಶ್ರೇಷ್ಠ ಆಟಗಾರರು. ಅವರಿಬ್ಬರ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಫುಟ್ಬಾಲ್ ಇತಿಹಾಸದಲ್ಲಿ ರೊನಾಲ್ಡೊ ಶ್ರೇಷ್ಠ ಆಟಗಾರ. ಮೆಸ್ಸಿ ಉತ್ತಮ ಆಟಗಾರನಾಗಿದ್ದಾರೆ’’ಎಂದು 39ರ ಹರೆಯದ ಪುಯೊಲ್ ಹೇಳಿದ್ದಾರೆ.





