ಮಹಿಳಾ ಹಾಕಿ ಟೆಸ್ಟ್ ಸರಣಿ: ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ಮತ್ತೊಂದು ಸೋಲು

ಹ್ಯಾಮಿಲ್ಟನ್, ಮೇ 16: ಉತ್ತಮ ಪ್ರದರ್ಶನ ಮುಂದುವರಿಸಿದ ನ್ಯೂಝಿಲೆಂಡ್ ಮಹಿಳಾ ಹಾಕಿ ತಂಡ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೆ ಪಂದ್ಯವನ್ನು 8-2 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿತು. ಈ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆತಿಥೇಯ ನ್ಯೂಝಿಲೆಂಡ್‌ನ ಪರವಾಗಿ ಸಮಂತಾ ಹ್ಯಾರಿಸನ್(3ನೆ ನಿಮಿಷ), ಸ್ಟ್ಯಾಸಿ ಮೈಕೆಲ್‌ಸನ್(21ನೆ, 30ನೆ ನಿಮಿಷ), ಕ್ರಿಸ್ಟ್ಟಿನ್ ಪೀಯರ್ಸ್(52ನೆ ನಿ.), ಮ್ಯಾಡಿಸನ್ ಡೊಯರ್(56ನೆ ನಿ.)ಹಾಗೂ ಸ್ಟೀಫನ್ ಡಿಕಿನ್ಸ್(60) ಗೋಲು ಬಾರಿಸಿದರು. ಭಾರತದ ಪರ ಲಿಲಿಮಾ ಮಿಂಝ್(40ನೆ ನಿ.) ಹಾಗೂ ಅನುಪಾ ಬಾರ್ಲ(49ನೆ ನಿ.) ತಲಾ ಒಂದು ಗೋಲು ಬಾರಿಸಿದರು.
ಪಂದ್ಯ ಆರಂಭವಾಗಿ 3 ನಿಮಿಷ ಕಳೆಯುವಷ್ಟರಲ್ಲಿ ಸಮಂತಾ ಹ್ಯಾರಿಸನ್ ಕಿವೀಸ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 6ನೆ ನಿಮಿಷದಲ್ಲಿ ಸಮಬಲ ಸಾಧಿಸುವ ಅವಕಾಶವಿದ್ದರೂ ಸ್ಟ್ರೈಕರ್ ರಾಣಿ ಆ ನಿಟ್ಟಿನಲ್ಲಿ ವಿಫಲರಾದರು.
ಫಾರ್ಮ್‌ನಲ್ಲಿರುವ ಗೋಲ್‌ಕೀಪರ್ ಸವಿತಾ ಉತ್ತಮ ಕೀಪಿಂಗ್‌ನ ಮೂಲಕ ನ್ಯೂಝಿಲೆಂಡ್‌ಗೆ ಹಲವು ಗೋಲುಗಳನ್ನು ನಿರಾಕರಿಸಿದರು. ಅನುಪಾ ಬಾರ್ಲ 12ನೆ ನಿಮಿಷದಲ್ಲಿ ಬಾರಿಸಿದ ಚೆಂಡನ್ನು ಕಿವೀಸ್ ಕೀಪರ್ ಗ್ರೇಸ್ ಒ’ಹ್ಯಾನ್ಲೋನ್ ತಡೆದರು.
ಕಿವೀಸ್ ಆಟಗಾರ್ತಿಯರು ಗೋಲುಗಳ ಸಂಖ್ಯೆ ಹೆಚ್ಚಿಸುವತ್ತ ಗಮನ ನೀಡಿ ಭಾರತಕ್ಕೆ ಒತ್ತಡ ಹೇರಿದರು. ಕಿವೀಸ್‌ನ ಕರಾರುವಾಕ್ ಆಟಕ್ಕೆ ಪ್ರತಿರೋಧ ತೋರಲು ಭಾರತೀಯ ಆಟಗಾರ್ತಿಯರು ವಿಫಲರಾದರು.
ಉಭಯ ತಂಡಗಳು ಮೇ 17 ರಂದು ಮೂರನೆ ಪಂದ್ಯವನ್ನಾಡಲಿವೆ.







