ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ಫೆಡರರ್

ಪ್ಯಾರಿಸ್, ಮೇ 16: ಸ್ವಿಸ್‌ನ ಹಿರಿಯ ಆಟಗಾರ ರೋಜರ್ ಫೆಡರರ್ ವಿಂಬಲ್ಡನ್ ಟೂರ್ನಿಯಲ್ಲಿ ಗಮನ ನೀಡುವ ಉದ್ದೇಶದಿಂದ ಮುಂಬರುವ ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಫೆಡರರ್ ಆರು ತಿಂಗಳ ಕಾಲ ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದರು. ಮೇ 28 ರಿಂದ ಜೂ.11ರ ತನಕ ನಡೆಯಲಿರುವ ಪ್ರಮುಖ ಕ್ಲೇ ಕೋಟ್ ಟೂರ್ನಿ ಫ್ರೆಂಚ್ ಓಪನ್‌ನಿಂದ ಸತತ ಎರಡನೆ ವರ್ಷವೂ ಹೊರಗುಳಿಯಲಿದ್ದಾರೆ.
‘‘ಎಟಿಪಿ ವರ್ಲ್ಡ್ ಟೂರ್‌ನಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಕಠಿಣ ಶ್ರಮಪಡುತ್ತಿರುವೆ. ಗ್ರಾಸ್ ಹಾಗೂ ಹಾರ್ಡ್‌ಕೋರ್ಟ್ ಋತುವಿಗೆ ತಯಾರಿ ನಡೆಸುವ ಉದ್ದೇಶದಿಂದ ಈ ಋತುವಿನಲ್ಲಿ ಕ್ಲೇ-ಕೋರ್ಟ್‌ನಲ್ಲಿ ಆಡದಿರಲು ನಿರ್ಧರಿಸಿದ್ದೇನೆ’’ಎಂದು 2009ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದ ಫೆಡರರ್ ಹೇಳಿದ್ದಾರೆ.
ಫ್ರೆಂಚ್ ಓಪನ್‌ಗೆ ಮೊದಲು ರಫೆಲ್ ನಡಾಲ್ ಸತತ ಮೂರು ಕ್ಲೇ ಕೋರ್ಟ್ ಪ್ರಶಸ್ತಿಯನ್ನು ಜಯಿಸಿದ್ದು, ಸ್ಪೇನ್ ಆಟಗಾರ ನಡಾಲ್ 10ನೆ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿದ್ದಾರೆ. ನಡಾಲ್ ಭರ್ಜರಿ ಫಾರ್ಮ್‌ನಲ್ಲಿರುವಾಗಲೇ ಫೆಡರರ್ ಈ ಘೋಷಣೆ ಮಾಡಿದ್ದಾರೆ.
30ರ ಹರೆಯದ ಫೆಡರರ್ ಈವರ್ಷ ಮೂರು ಪ್ರಮುಖ ಪ್ರಶಸ್ತಿಗಳಾದ ಆಸ್ಟ್ರೇಲಿಯನ್ ಓಪನ್, ಇಂಡಿಯನ್ ವೆಲ್ಸ್ ಹಾಗೂ ಮಿಯಾಮಿ ಓಪನ್‌ನ್ನು ಜಯಿಸಿದ್ದಾರೆ. ಫೆಡರರ್ ತಲಾ ಐದು ಬಾರಿ ಯುಎಸ್ ಹಾಗೂ ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ಜಯಿಸಿದ್ದು, ಏಳು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.







