ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ: ಆ್ಯಪ್ ಅಭಿವೃದ್ಧಿಪಡಿಸಿ ಎಲ್ಲರ ಹುಬ್ಬೇರಿಸಿದ ಬಾಲಕ

ಹೊಸದಿಲ್ಲಿ, ಮೇ 16: ಜಮ್ಮು ಕಾಶ್ಮೀರ ಸರಕಾರ ಸಾಮಾಜಿಕ ಜಾಲತಾಣ ವೆಬ್ ಸೈಟ್ ಗಳಿಗೆ ನಿರ್ಭಂದ ಹೇರಿದ ವಾರಗಳ ಬಳಿಕ 16 ವರ್ಷದ ಬಾಲಕನೋರ್ವ ಹೊಸ ಆ್ಯಪೊಂದನ್ನು ಅಭಿವೃದ್ಧಿಪಡಿಸಿ ಎಲ್ಲರ ಹುಬ್ಬೇರಿಸಿದ್ದಾನೆ.
ಇತ್ತೀಚೆಗಷ್ಟೇ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಝೆಯಾನ್ ಶಫೀಕ್ ತನ್ನ ಸ್ನೇಹಿತ ಉಝೈರ್ ಜಾನ್ ಜೊತೆಗೂಡಿ ಕಾಶ್ ಬುಕ್ ಎನ್ನುವ ವೆಬ್ ಸೈಟನ್ನು 2013ರಲ್ಲೇ ಅಭಿವೃದ್ಧಿಪಡಿಸಿದ್ದ. ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರ ಸರಕಾರ ಸಾಮಾಜಿಕ ಜಾಲತಾಣ ಹಾಗೂ ವೆಬ್ ಸೈಟ್ ಗಳ ಮೇಲೆ ನಿರ್ಬಂಧ ಹೇರಿದ ನಂತರ ಕಾಶ್ ಬುಕ್ ಅನ್ನು ಆ್ಯಪ್ ಆಗಿ ಅಭಿವೃದ್ಧಿಪಡಿಸಿದ್ದಾನೆ.
ಲಾಂಚ್ ಆದ ವಾರದೊಳಗೆ ಸಾವಿರಾರು ಕಾಶ್ಮೀರಿಗರು ಆ್ಯಪ್ ಗೆ ಸೇರ್ಪಡೆಯಾಗಿದ್ದಾರೆ. ಈ ಆ್ಯಪ್ ನ ವಿಶೇಷತೆಯೆಂದರೆ ಬಳಕೆದಾರರು ಕಾಶ್ಮೀರಿ ಭಾಷೆಯಲ್ಲೇ ಇದರಲ್ಲಿ ವ್ಯವಹರಿಸಬಹುದಾಗಿದೆ.
“ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಸರಕಾರ ನಿರ್ಬಂಧ ಹೇರಿದೆ. ಇದರಿಂದಾಗಿ ಕಾಶ್ಮೀರದ ಜನತೆ ಪರಸ್ಪರ ಸಂವಹನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಕಾಶ್ ಬುಕ್ ಅನ್ನು ಮತ್ತೊಮ್ಮೆ ಲಾಂಚ್ ಮಾಡಿದ್ದೇನೆ” ಎನ್ನುತ್ತಾರೆ ಝೆಯಾನ್.
“ಈ ಪ್ರಯತ್ನದಿಂದ ಪ್ರೇರಿತರಾಗಿ ಅನೇಕ ಯುವಜನರು ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಕಾಶ್ಮೀರಕ್ಕೆ ಹಾಗೂ ಕಾಶ್ಮೀರಿಗರಿಗೆ ಸಹಾಯವಾಗುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು” ಎಂದು ಝೆಯಾನ್ ಹೇಳುತ್ತಾರೆ.
ಎಪ್ರಿಲ್ 26ರಂದು ಕಾಶ್ಮೀರ ಸರಕಾರ ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ಯಾಪ್, ವಿ ಚಾಟ್, ಒಝೋನ್, ಗೂಗಲ್ ಪ್ಲಸ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ನಿರ್ಬಂಧ ಹೇರಿತ್ತು.








