ಬಂಟ್ವಾಳ : ಗಾಂಜಾ ಸೇದಲು ನಿರಾಕರಿಸಿದ ದಲಿತ ಸಹೋದರರಿಗೆ ತಂಡದಿಂದ ಹಲ್ಲೆ

ಬಂಟ್ವಾಳ, ಮೇ 16: ಗಾಂಜಾ ಸೇದಲು ಒತ್ತಾಯಿಸಿದಾಗ ನಿರಾಕರಿಸಿದ ಇಬ್ಬರು ದಲಿತ ಬಾಲಕರಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ಸಮೀಪದ ಕುಮುಡೇಲು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕುಮುಡೇಲು ನಿವಾಸಿ ಸುಜಾತಾ ಎಂಬವರ ಮಕ್ಕಳಾದ ಸಮಂತ್(16) ಮತ್ತು ಸುಶಾಂತ್(14) ತಂಡದಿಂದ ಹಲ್ಲೆಗೊಳಗಾದ ಸಹೋದರರು. ಸಮಂತ್ ಮೇರಮಜಲು ನಿತ್ಯ ಸಹಾಯ ಮಾತ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದರೆ, ಸುಶಾಂತ್ ಮೇರಮಜಲು ಹೋಲಿ ಫ್ಯಾಮಿಲಿ ಶಾಲೆಯ 7ನೆ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಸುಶಾಂತ್ ಬುದ್ಧಿಮಾಂದ್ಯ ಬಾಲಕನಾಗಿದ್ದಾನೆ.
ತುಂಬೆ ಗ್ರಾಮದ ಕೆಳಗಿನ ತುಂಬೆ ನಿವಾಸಿ ಸದಾ ಎಂಬವರ ಪುತ್ರ ಶ್ರವಣ್, ಕುಮುಡೇಲು ನಿವಾಸಿಗಳಾದ ರೋಷನ್, ಅವಿನಾಶ್, ಚರಣ್, ರಾಜೇಶ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಸಮಂತ್ ಮತ್ತು ಸುಶಾಂತ್ ಮಂಗಳವಾರ ಮಧ್ಯಾಹ್ನ ಕುಮುಡೇಲು ಸರಕಾರಿ ಶಾಲೆಯ ಆವರಣದೊಳಗೆ ಆಟವಾಡುತ್ತಿದ್ದ ಸಂದರ್ಭ ಅಲ್ಲಿ ಗಾಂಜಾ ಸೇದುತ್ತಿದ್ದ ಈ ಐವರು ಸಮಂತ್ ಮತ್ತು ಸುಶಾಂತ್ ರನ್ನು ಕರೆದು ಗಾಂಜಾ ಸೇದುವಂತೆ ಒತ್ತಾಯಿಸಿದ್ದಾರೆ. ಗಾಂಜಾ ಸೇದಲು ನಿರಾಕರಿಸಿದ ಇಬ್ಬರ ಬಾಯಿಗೆ ಆರೋಪಿಗಳು ಬೀಡಿಯನ್ನಿಟ್ಟು ಸೇದುವಂತೆ ಬಲವಂತ ಮಾಡಿದ್ದಾರೆ. ಬೀಡಿ ಸೇದಲು ಬಾಲಕರು ನಿರಾಕರಿಸಿದಾಗ ಶ್ರವಣ್ ಎಂಬಾತ ಇಬ್ಬರನ್ನೂ ಶಾಲೆಯ ಆವರಣಗೋಡೆಯ ಮೇಲೆ ಕುಳ್ಳಿರಿಸಿ ಪಾದಕ್ಕೆ ಮರದ ಕೋಲಿನಿಂದ ಮನಸ್ಸೋಇಚ್ಚೆ ಹಲ್ಲೆ ನಡೆಸಿದ್ದಾನೆ. ಬಳಿಕ ಇಬ್ಬರ ಕೈಗಳಿಗೆ ಕೋಲಿನಿಂದ ಹೊಡೆದಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹಲ್ಲೆಗೊಳಗಾದ ಸಮಂತ್ ವಿವರಿಸಿದ್ದಾನೆ.
"ಶಾಲೆಯ ಆವರಣ ಗೋಡೆ ಮತ್ತು ನಮ್ಮ ಮನೆಯ ಆವರಣಗೋಡೆ ಒಂದೇ ಆಗಿದೆ. ಅಳುತ್ತಾ ಮನೆಗೆ ಬಂದ ಮಕ್ಕಳನ್ನು ವಿಚಾರಿಸಿದಾಗ ಗಾಂಜಾ ಸೇದುವಂತೆ ಒತ್ತಾಯಿಸಿದಾಗ ನಿರಾಕರಿಸಿದಕ್ಕೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ಕೂಡಲೇ ನಾನು ಶಾಲೆ ಮೈದಾನಕ್ಕೆ ತೆರಳಿ ಅಲ್ಲಿಯೇ ಇದ್ದ ಹಲ್ಲೆ ನಡೆಸಿದ ಐವರನ್ನು ವಿಚಾರಿಸಿದಾಗ ಬುದ್ಧಿಗಾಗಿ ಹೊಡೆದಿದ್ದೇವೆ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ಹಲ್ಲೆಯಿಂದಾಗಿ ಇಬ್ಬರ ಕಾಲಿನಡಿಗೆ ಗಂಭೀರ ಗಾಯಗಳಾಗಿದ್ದು ನಡೆಯಲು ಸಾಧ್ಯವಾಗುತ್ತಿಲ್ಲ" ಎಂದು ಸಹೋದರರ ತಾಯಿ ತಾಯಿ ಸುಜಾತಾ ಪತ್ರಿಕೆಗೆ ತಿಳಿಸಿದ್ದಾರೆ.
ಗಾಂಜಾ ಕೇಸಿನಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಈ ಐವರು ಆರೋಪಿಗಳು ಕೆಲವು ದಿನಗಳ ಹಿಂದೆಯಷ್ಟೇ ಜಾಮೀನಿನಿಂದ ಹೊರಬಂದಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸಲು ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ದಲಿತ ನಾಯಕರ ಆಗ್ರಹ
ಮಾರಿಪಳ್ಳ ಸಮೀಪದ ಕುಮುಡೇಲು ಸರಕಾರಿ ಶಾಲೆಯ ಆವರಣ ಗಾಂಜಾ ವ್ಯಸನಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಸಂಜೆಯಾಗುತ್ತಿದ್ದಂತೆ ಇಲ್ಲಿಗೆ ವಿವಿಧ ಕಡೆಯಿಂದ ಬರುವ ಯುವಕರು ತಡರಾತ್ರಿಯವರೆಗೆ ಗಾಂಜಾ ಸೇವಿಸುತ್ತಾ ಮಜಾ ಮಾಡುತ್ತಿರುತ್ತಾರೆ. ಈ ಬಗ್ಗೆ ಮಾಹಿತಿ ಇದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದರೆ ಗಾಂಜಾ ಮಾಫಿಯಾದವರು ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಗಾಂಜಾದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇಂದು ಗಾಂಜಾ ಸೇವಿಸುವಂತೆ ಒತ್ತಾಯಿಸಿದಾಗ ನಿರಾಕರಿಸಿದ ಇಬ್ಬರು ದಲಿತ ಬಾಲಕರಿಗೆ ಐವರು ಸೇರಿ ಹಲ್ಲೆ ನಡೆಸಿರುವುದು ಖಂಡನೀಯವಾಗಿದೆ. ಈ ಬಗ್ಗೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಐವರು ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಲಾಗಿದೆ.
- ಶಿವಾನಂದ ಎಸ್. ಪಾಂಡು, ಅಖಿಲ ಭಾರತ ದಲಿತ ಒಕ್ಕೂಟದ ರಾಜ್ಯ ಕಾರ್ಯದರ್ಶಿ







