ಮದುವೆ ನಿಲ್ಲಿಸಿದ ರಿವಾಲ್ವರ್ ರಾಣಿ ವರನನ್ನೇ ಅಪಹರಿಸಿದಳು....ಏಕೆ ಗೊತ್ತೇ?

ಬುಂದೇಲಖಂಡ್(ಉ.ಪ್ರ),ಮೇ 17: ಮಂಗಳವಾರ ತಡರಾತ್ರಿ ಇಲ್ಲಿಯ ಮದುವೆ ಮಂಟಪವೊಂದಕ್ಕೆ ನುಗ್ಗಿದ, ಎಸ್‌ಯುವಿ ವಾಹನದಲ್ಲಿ ಬಂದಿದ್ದ 25ರ ಹರೆಯದ ಸುಂದರಿ ನೇರವಾಗಿ ರಿವಾಲ್ವರ್‌ನ್ನು ವರನ ತಲೆಗಿಟ್ಟು,‘‘ಈ ವ್ಯಕ್ತಿ ನನ್ನನ್ನು ಪ್ರೀತಿಸುತ್ತಿದ್ದಾನೆ. ಈಗ ಬೇರೆಯವಳನ್ನು ಮದುವೆಯಾಗಿ ನನ್ನನ್ನು ವಂಚಿಸುತ್ತಿದ್ದಾನೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ’’ಎಂದು ಘೋಷಿಸಿದಾಗ ಮದುವೆಗೆ ಬಂದವರೆಲ್ಲ ತಬ್ಬಿಬ್ಬಾಗಿದ್ದರು.
ತನ್ನ ಜೊತೆ ಇಬ್ಬರು ಯುವಕರನ್ನು ಕರೆತಂದಿದ್ದ ರಿವಾಲ್ವರ್ ರಾಣಿ ವರನನ್ನು ಎಳೆದೊಯ್ದು ವಾಹನದಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾಳೆ.
ವರ ಅಶೋಕ ಯಾದವ ಎಲ್ಲಿದ್ದಾನೆಂಬ ಸುಳಿವು ಸಿಕ್ಕಿಲ್ಲ. ಆತ ತನ್ನನ್ನು ಅಪಹರಿಸಿರುವ ಯುವತಿಯನ್ನು ಕೆಲವು ತಿಂಗಳ ಹಿಂದೆ ಭೇಟಿಯಾಗಿದ್ದು, ಅವರಿಬ್ಬರೂ ಪರಸ್ಪರ ಪ್ರೇಮಿಸುತ್ತಿದ್ದರು, ಗುಟ್ಟಾಗಿ ಮದುವೆಯನ್ನೂ ಮಾಡಿಕೊಂಡಿದ್ದರು. ಆದರೆ ತನ್ನ ಕುಟುಂಬದವರ ಒತ್ತಡಕ್ಕೆ ಮಣಿದಿದ್ದ ಯಾದವ ಅವರು ನೋಡಿದ್ದ ಯುವತಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದ.
ರಿವಾಲ್ವರ್ ರಾಣಿ ಯಾದವನನ್ನು ಅಪಹರಿಸಿ ಮಹಿಂದ್ರಾ ಸ್ಕಾರ್ಪಿಯೋ ವಾಹನದಲ್ಲಿ ಅಲ್ಲಿಂದ ತೆರಳುತ್ತಿದ್ದಂತೆ ವಧು ಭಾರತಿ ಯಾದವ ದುಃಖದ ಕಟ್ಟೆಯೊಡೆದಿತ್ತು. ತನ್ನ ದುರದೃಷ್ಟವನ್ನು ಹಳಿದುಕೊಂಡ ಆಕೆ, ತನ್ನ ವೈರಿಗಳಿಗೂ ಇಂತಹ ಶಿಕ್ಷೆಯನ್ನು ತಾನು ಬಯಸುವುದಿಲ್ಲ ಎಂದು ನಿಡುಸುಯ್ದಳು.
‘‘ಖಂಡಿತವಾಗಿಯೂ ನಮ್ಮ ಮಗನ ಬಗ್ಗೆ ನಮಗೆ ಏನೋ ಸಂಶಯವಿತ್ತು. ಆತ ಕೆಲಸ ಮಾಡುತ್ತಿರುವ ಊರಿನಲ್ಲಿ ನಾನು ಆತನನ್ನು ಭೇಟಿಯಾಗಲು ಬಯಸಿದಾಗೆಲ್ಲ ಆತ ನನ್ನನ್ನು ಮನೆಗೆ ಕರೆಯುತ್ತಿರಲಿಲ್ಲ. ಯಾವುದಾದರೂ ದೇವಸ್ಥಾನದಲ್ಲಿ ಭೇಟಿಯಾ ಗುತ್ತಿದ್ದ ಮತ್ತು ಸಮೀಪದ ಹೋಟೆಲ್‌ನಲ್ಲಿ ಊಟ ಹಾಕಿಸಿ ಕಳುಹಿಸುತ್ತಿದ್ದ ಎಂದು ವರನ ತಂದೆ ರಾಮಹೇತ್ ಯಾದವ ಗೋಳು ತೋಡಿಕೊಂಡಿದ್ದಾನೆ.
ವಧುವಿನ ಕುಟುಂಬ ವರನ ಅಪಹರಣ ದೂರನ್ನು ದಾಖಲಿಸಿದೆ. ನ್ಯಾಯವನ್ನು ಒದಗಗಿಸುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರಾದರೂ, ಖಾಸಗಿ ಯಾಗಿ ಒಂದಿಬ್ಬರು ಅಧಿಕಾರಿಗಳು ರಿವಾಲ್ವರ್ ರಾಣಿಯನ್ನು ಪ್ರಶಂಸಿಸಿದ್ದಾರೆ.
ತಮ್ಮನ್ನು ವಂಚಿಸುವ ಯುವಕರಿಗೆ ಕೆಲವು ಮಹಿಳೆಯರು ಪಾಠ ಕಲಿಸಬಲ್ಲರು ಎನ್ನುವುದಕ್ಕೆ ಈ ರಿವಾಲ್ವರ್ ರಾಣಿ ಸಾಕ್ಷಿಯಾಗಿದ್ದಾಳೆ ಎಂದು ಅವರು ಹೇಳಿದರು.







