ಗುಡಿಸಲಿಗೆ ನುಗ್ಗಿದ ಟ್ರಕ್: ಐವರ ದಾರುಣ ಸಾವು

ಜಮಷೆಡ್ಪುರ್(ಜಾರ್ಖಂಡ್),ಮೇ 17: ಪೂರ್ವ ಸಿಂಗಭೂಮ್ ಜಿಲ್ಲೆಯ ಧಲ್ಭೂಮಗರ್ ಪ್ರದೇಶದಲ್ಲಿ ಬುಧವಾರ ನಸುಕಿನ ವೇಳೆ ಟ್ರಕ್ಕೊಂದು ರಾಷ್ಟ್ರೀಯ ಹೆದ್ದಾರಿ ಬದಿಯ ಗುಡಿಸಲಿಗೆ ನುಗ್ಗಿದ ಪರಿಣಾಮ ಒಂದೇ ಕುಟುಂಬಕ್ಕೆ ಸೇರಿದ ಐವರು ದಾರುಣ ಸಾವನ್ನಪ್ಪಿದ್ದಾರೆ.
ಚಾಕುಲಿಯಾದಿಂದ ಬಾಹರಗೋರಾಕ್ಕೆ ತೆರಳುತ್ತಿದ್ದ ಟ್ರಕ್‌ನ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು ಈ ದುರಂತಕ್ಕೆ ಕಾರಣವಾಗಿದೆ. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದು, ದುರಂತದ ಸಂದರ್ಭ ಅವರೆಲ್ಲ ಗಾಢನಿದ್ರೆಯಲ್ಲಿದ್ದರು ಎಂದು ಉಪವಿಭಾಗ ಪೊಲೀಸ್ ಅಧಿಕಾರಿ ಸಂಜೀವ ಬೆಸ್ರಾ ತಿಳಿಸಿದರು.
ಈ ಅಪಘಾತದಲ್ಲಿ ಇದೇ ಕುಟುಂಬದ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ಕೆಲಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ತಡೆದು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಮತ್ತು ಅಪಘಾತದ ಬಳಿಕ ಪರಾರಿಯಾಗಿರುವ ಚಾಲಕನನ್ನು ಬಂಧಿಸುವಂತೆ ಆಗ್ರಹಿಸಿದರು.
Next Story





