ಬಾಹುಬಲಿ 2:ಕರಣ್ ಜೋಹರ್‌ಗೆ ಬ್ಲಾಕ್‌ಮೇಲ್,ಆರು ಜನರ ಸೆರೆ

ಹೈದರಾಬಾದ್,ಮೇ 17: ‘ಬಾಹುಬಲಿ 2:ದಿ ಕನ್‌ಕ್ಲೂಷನ್ ’ಬಿಡುಗಡೆಯಾದಾಗಿ ನಿಂದಲೂ ಯಶಸ್ಸಿನ ದಾಪುಗಾಲು ಹಾಕುತ್ತ ಮುನ್ನಡೆಯುತ್ತಲೇ ಇದೆ. ಬಾಕ್ಸ್ ಆಫೀಸಿ ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿರುವ ಚಿತ್ರವು 1,500 ಕೋ.ರೂ. ಗಳಿಕೆಯ ಆದಾಯವನ್ನು ದಾಟಲು ಸಜ್ಜಾಗುತ್ತಿದೆ. ಇವೆಲ್ಲವುಗಳ ಮಧ್ಯೆ ಚಿತ್ರದ ವಿತರಕ ಕರಣ್ ಜೋಹರ್ ಅವರಿಗೆ ಆರು ಜನರ ಗ್ಯಾಂಗೊಂದು ಬ್ಲಾಕ್‌ಮೇಲ್ ಮಾಡಿದ್ದು, ಇದರಿಂದಾಗಿ ಸಂಭ್ರಮದಲ್ಲಿಯೂ ಆತಂಕ ಮನೆಮಾಡಿತ್ತು.
ಬಾಹುಬಲಿ 2ರ ಎಚ್‌ಡಿ ಪ್ರಿಂಟ್‌ನ್ನು ಸೋರಿಕೆ ಮಾಡಲು ಯತ್ನಿಸುತ್ತಿದ್ದ ಆರು ಜನರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಓರ್ವ ಥಿಯೇಟರ್ ಮಾಲಕನೂ ಸೇರಿರುವ ಈ ಗ್ಯಾಂಗ್ ಕರಣ್ ಜೋಹರ್ ಅವರನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸಿತ್ತಲ್ಲದೆ, ಪೈರೇಟೆಡ್ ಕಾಪಿಯನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡದಿರಲು 15 ಲ.ರೂ.ಗಳಿಗೆ ಬೇಡಿಕೆಯನ್ನಿಟ್ಟಿತ್ತು.
ಅಂತಿಮವಾಗಿ ಚಿತ್ರದ ನಿರ್ಮಾಣ ಸಂಸ್ಥೆ ಅರ್ಕಾ ಮೀಡಿಯಾ ವರ್ಕ್ಸ್‌ನ ಪ್ರತಿನಿಧಿ ಪ್ರಸಾದ್ ದೇವಿನೇನಿ ಅವರು ಸೈಬರ್ ಅಪರಾಧ ಘಟಕದಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಗ್ಯಾಂಗ್‌ನ ಸದಸ್ಯರು ಅಂತರ್‌ರಾಜ್ಯ ಚಲನಚಿತ್ರ ಪೈರೆಸಿ ಜಾಲಕ್ಕೆ ಸೇರಿದವರು ಎನ್ನಲಾಗಿದೆ.





