24 ಗಂಟೆಯೊಳಗೆ ಕ್ರಮವಾಗದಿದ್ದರೆ ಡಿಸಿ ಕಚೇರಿಯಲ್ಲಿ ಟೆಂಟ್ ವಾಸ: ಎನ್‌ಇಸಿಎಫ್ ಎಚ್ಚರಿಕೆ
ವಿಷಗೊಳ್ಳುತ್ತಿರುವ ಫಲ್ಗುಣಿ ನದಿ ನೀರು- ಜಲಚರಗಳ ಸಾವು- ದುರ್ನಾತ ಬೀರುತ್ತಿರುವ ಪರಿಸರ

ಮಂಗಳೂರು, ಮೇ 17: ಕರಾವಳಿಯ ಜೀವನದಿಯಲ್ಲಿ ಒಂದಾಗಿರುವ ಫಲ್ಗುಣಿ ನದಿಯ ನೀರು ಕೈಗಾರಿಕೆಗಳ ರಾಸಾಯನಿಯುಕ್ತ ತ್ಯಾಜ್ಯದಿಂದ ವಿಷಪೂರಿತಗೊಂಡು ಜಲಚರಗಳ ಮಾರಣ ಹೋಮವಾಗಿ ಪರಿಸರ ದುರ್ನಾತ ಬೀರುವ ವಾತಾವರಣ ಸೃಷ್ಟಿಯಾಗಿದೆ.
ರಾಷ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್)ದ ಪದಾಧಿಕಾರಿಗಳ ಜತೆಯಲ್ಲಿ ನಗರದ ಸುದ್ದಿಗಾರರು ಇಂದು ಮರವೂರಿನಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಿಂಡಿ ಅಣೆಕಟ್ಟಿಗೆ ಭೇಟಿ ನೀಡಿದ ಸಂದರ್ಭ ಅಣೆಕಟ್ಟಿನ ಒಂದು ಭಾಗದ ನೀರು ಸಂಪೂರ್ಣ ಕಪ್ಪಾಗಿ ಕಲುಷಿತ ಗೊಂಡಿರುವುದು ಕಂಡು ಬಂತು. ಮಾತ್ರವಲ್ಲದೆ ಅಣೆಕಟ್ಟಿನ ಅಂಚಿನಲ್ಲಿ ನದಿಯ ನೀರಿನಲ್ಲಿ ನೂರಾರು ನದಿ ಮೀನುಗಳು ಸತ್ತು ಬಿದ್ದಿದ್ದವು. ಅಣೆಕಟ್ಟಿನ ಪರಿಸರದಲ್ಲಿ ಮೂಗು ಮುಚ್ಚದೆ ಇರಲಾರದಷ್ಟು ದುರ್ನಾತವಾಗಿತ್ತು.
ಕೆಂಜಾರು ಬಳಿ ಸ್ಥಳೀಯರ ಹೇಳಿಕೆಗಳನ್ನು ಆಲಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್‌ಇಸಿಎಫ್‌ನ ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಕಳೆದ ಸುಮಾರು ಎರಡು ವಾರಗಳಿಂದೀಚೆಗೆ ಕೆಂಜಾರು, ಮರವೂರು ಹಾಗೂ 62 ತೋಕೂರು ಭಾಗದಲ್ಲಿ ನದಿ ನೀರಿನ ಅಂಚಿನಲ್ಲಿ ಜಲಚರಗಳು ಸಾವಿರಾರು ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿವೆ. ನದಿಯ ನೀರು ಸಂಪೂರ್ಣ ವಿಷಪೂರಿತವಾಗಿದ್ದು, ದುರ್ನಾತ ಬೀರುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ಒಂದೆಡೆ ಉಪ್ಪು ನೀರಿನ ಸಮಸ್ಯೆ, ಮತ್ತೊಂದೆಡೆ ದುರ್ನಾತದಿಂದಾಗಿ ವಾಸಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕಳೆದ ಒಂದು ವಾರದಿಂದ ಸುದ್ದಿಯಾಗಿದ್ದರೂ ಜಿಲ್ಲಾಡಳಿತ ಮಾತ್ರ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹಾಗಾಗಿ ಮುಂದಿನ 24 ಗಂಟೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಟೆಂಟ್ ಹಾಕಿ ವಾಸಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಎನ್‌ಇಸಿಎಫ್‌ನ ಅಧ್ಯಕ್ಷ ಸ್ವರ್ಣ ಸುಂದರ, ಪದಾಧಿಕಾರಿಗಳಾದ ರತ್ನಾಕರ ಸುವರ್ಣ, ನಾರಾಯಣ ಬಂಗೇರ ಉಪಸ್ಥಿತರಿದ್ದರು.
ಈ ಸಂದರ್ಭ ಕೆಂಜಾರು, 62 ತೋಕೂರು ಹಾಗೂ ಮರವೂರು ನಿವಾಸಿಗಳು ಉಪಸ್ಥಿತರಿದ್ದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ನದಿ ಸಮೀಪದ ಬಾವಿಗಳು ಕಲುಷಿತ
ಈಗಾಗಲೇ ನದಿಯ ಉಪ್ಪು ನೀರಿನ ಸಮಸ್ಯೆಯಿಂದಾಗಿ ಪರಿಸರದ ಹಲವು ಬಾವಿಗಳಲ್ಲೂ ಡಿಸೆಂಬರ್ ನಂತರ ಬೇಸಿಗೆಯಲ್ಲಿ ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪಂಚಾಯತ್ ವತಿಯಿಂದ ಇಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವು ಬಾವಿಗಳ ನೀರು ಉಪ್ಪಾಗಿಲ್ಲವಾದರೂ ಬಿಸಿ ಮಾಡಿದಾಗ ನೀರಿನ ಮೇಲೆ ತೈಲದಂತಹ ದ್ರವ ತೇಲುತ್ತಿರುತ್ತದೆ. ಈ ನೀರಿನಲ್ಲಿ ತಯಾರಿಸಿದ ಅನ್ನವನ್ನು ಮರುದಿನಕ್ಕೆ ಇಡಲು ಸಾಧ್ಯವೇ ಆಗುತ್ತಿಲ್ಲ ಎಂದು ತೋಕೂರು ನಿವಾಸಿ ಎಲ್ವಿಟಾ ಹೇಳಿದರು.
ಎರಡು ತಿಂಗಳಿನಿಂದೀಚೆಗೆ ನದಿಯಂಚಿನಲ್ಲಿ ಮೀನುಗಳು ರಾಶಿರಾಶಿಯಾಗಿ ಸಾಯುತ್ತಿರುವುದು ಕಂಡು ಬರುತ್ತಿದೆ. ಮನೆಯ ಕಿಟಕಿ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ಹೊರಗೆ ಬಂದಾಗ ವಾಂತಿ ಬಂದಂತೆ ಆಗುತ್ತಿದೆ. ಒಂದೊಮ್ಮೆ ಮರಳುಗಾರಿಕೆಯ ಸಮಸ್ಯೆಯಿಂದ ಜರ್ಝರಿತವಾಗಿದ್ದ ನಮ್ಮ ಪರಿಸ್ಥಿತಿ ಇದೀಗ ನದಿ ನೀರು ಕಲುಷಿತವಾಗಿ ಜೀವಿಸಲೂ ಆಗದಂತೆ ಆಗಿದೆ ಎಂದು ಕೆಂಜಾರು ನಿವಾಸಿ ಶೈಲಾ ಬೇಸರ ವ್ಯಕ್ತಪಡಿಸಿದರು.
ನೀರಿಗಿಳಿದರೆ ತುರಿಕೆ
ನದಿ ನೀರಿಗೆ ಏನಾದರೂ ಕಾಲು ಹಾಕಿದರೆ ಸಾಕು ಕಾಲೆಲ್ಲಾ ತುರಿಸಲು ಆರಂಭವಾಗುತ್ತದೆ. ಅಲರ್ಜಿ ಆದ ರೀತಿಯಲ್ಲಿ ಮೈಯಲ್ಲಿ ಸಣ್ಣ ಗುಳ್ಳೆಗಳು ಎಂದು ಕೆಂಜಾರು ನಿವಾಸಿ ಕ್ಲಾವಿ ಎಂಬವರು ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಸ್ಥಳೀಯ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯವು ನದಿಗೆ ಸೇರುತ್ತಿರುವುದರಿಂದಲೇ ಈ ಪರಿಸ್ಥಿತಿ ಸಂಭವಿಸಿದೆ. ಈ ಬಗ್ಗೆ ಮರವೂರು ಗ್ರಾ.ಪಂಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಸ್ಥಳೀಯರಾದ ರೆಜಿನಾಲ್ಡ್ ಹೇಳಿದರು.
56 ವರ್ಷಗಳ ಬಳಿಕ ಈ ಸಮಸ್ಯೆ ನೋಡಿದ್ದು!
‘‘ನಾನು ಹುಟ್ಟಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನದಿ ನೀರು ಈ ರೀತಿ ಕಪ್ಪಾಗಿ ಕಲುಷಿತಗೊಂಡು ಮೀನುಗಳು ಸತ್ತಿರುವುದನ್ನು ಕಂಡಿರುವುದು. ಪಂಚಾಯತ್‌ನವರಿಗೆ ಹೇಳಿದರೂ ಕ್ಯಾರೇ ಮಾಡುವುದಿಲ್ಲ. ಕೆಲ ದಿನಗಳ ಹಿಂದೆ ನೀರು ಕೆಂಪು ಬಣ್ಣಕ್ಕೆ ತಿರುಗಿತ್ತು. ನೀರು ಕಪ್ಪಾಗಿರುವುದು ಮಾತ್ರವಲ್ಲ, ನಮ್ಮ ಭಾಗದ ಮನೆಗಳವರಿಗೆ ದುರ್ನಾತ ಸಹಿಸಲಾಗುತ್ತಿಲ್ಲ’’
ಟೈಟಸ್ ಡಿಸೋಜಾ, ಪಡುಶೆಡ್ಡೆ ಕುದ್ರು ನಿವಾಸಿ
ನದಿ ನೀರು ಕಲುಷಿತಗೊಂಡು ಸುಟ್ಟು ಹೋದಂತಿವೆ ಕುದ್ರುವಿನ ಗಿಡಗಳು
ಮರವೂರು ಡ್ಯಾಂ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ಬಳಿಕ ಅಂದರೆ ಈ ವರ್ಷದಿಂದ ನಮಗೆ ಉಪ್ಪು ನೀರಿನ ಸಮಸ್ಯೆ ತೀವ್ರ ತೆರನಾಗಿ ಬಾಧಿಸುತ್ತಿದೆ. ಪರಿಸರದ ಸುಮಾರು 60 ಮನೆಗಳ ಬಾವಿ ನೀರು ಉಪ್ಪಾಗಿದೆ. ಇತ್ತೀಚೆಗೆ ಈ ನದಿಯ ನೀರು ಕುಡಿದ ಪ್ರಕಾಶ್ ಶೆಟ್ಟಿ ಎಂಬವರ ಮೂರು ದನಗಳು ಸಾವನ್ನಪ್ಪಿವೆ.
ನದಿ ನೀರು ವಿಷಪೂರಿತವಾಗಿರುವುದಕ್ಕೆ ನದಿ ನಡುವಿನ ಕುದ್ರುವಿನಲ್ಲಿರುವ ಗಿಡಗಳು ಸುಟ್ಟು ಹೋದಂತಿರುವುದೇ ಸಾಕ್ಷಿ. ಈಗಾಗಲೇ ನದಿಯಲ್ಲಿ ಮರಳುಗಾರಿಕೆ ನಡೆಸುವವರು ಕಾಂಡ್ಲಾ ಗಿಡಗಳನ್ನು ನಾಶ ಪಡಿಸಿ ತೊಂದರೆ ಮಾಡಿದ್ದಾರೆ. ಇದೀಗ ನದಿ ನೀರು ವಿಷಪೂರಿತವಾಗಿ ಜಲಚರಗಳ ಸಾವಿನ ಜತೆಗೆ ಸ್ಥಳೀಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕೆಂಜಾು ನಿವಾಸಿ ಅಮೀರ್ ಪ್ಯಾರಾ ಹೇಳಿದರು.