ಆರ್‌ಟಿಇ ದುರುಪಯೋಗವಾದರೆ ಕಠಿಣ ಕ್ರಮ : ತನ್ವೀರ್‌ಸೇಠ್ ಎಚ್ಚರಿಕೆ

ಬೆಂಗಳೂರು, ಮೇ 17: ಶಿಕ್ಷಣ ಹಕ್ಕು ಕಾಯಿದೆ(ಆರ್‌ಟಿಇ)ಸೀಟುಗಳು ಸ್ಥಿತಿವಂತ ಪೋಷಕರು ದುರುಪಯೋಗ ಪಡಿಸಿಕೊಳ್ಳುತ್ತಿರುವುದರ ಕುರಿತು ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದು ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಬುಧವಾರ ನಗರದ ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೂಲಿಕಾರ್ಮಿಕರು, ದಲಿತರು, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಆರ್‌ಟಿಇ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಆದರೆ, ಹಣವಂತರು ಈ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಆರ್‌ಟಿಇ ಸೌಲಭ್ಯ ದುರುಪಯೋಗವಾಗುವಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಸರಕಾರಕ್ಕೆ ವರದಿ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿ ಸುತ್ತೋಲೆಯನ್ನು ಹೊರಡಿಸುವಂತೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಈ ಬಾರಿ ಒಟ್ಟು ಒಂದು ಲಕ್ಷದ ಇಪ್ಪತ್ತೊಂಬತ್ತು ಸಾವಿರ ಸೀಟುಗಳನ್ನು ಆರ್‌ಟಿಇಯಡಿ ಕಾಯ್ದಿರಿಸಲಾಗಿತ್ತು. ಮೊದಲ ಹಂತವಾಗಿ 86ಸಾವಿರ ಸೀಟುಗಳು ಭರ್ತಿಯಾಗಿದ್ದು. ಇನ್ನು 12ಸಾವಿರ ಸೀಟುಗಳನ್ನು ಭರ್ತಿಯಾಗು ಹಂತದಲ್ಲಿದೆ. ಹಾಗೂ ಎರಡನೇ ಹಂತದಲ್ಲಿ ಉಳಿದ ಎಲ್ಲ ಆರ್‌ಟಿಇ ಸೀಟುಗಳನ್ನು ಕಾನೂನು ಬದ್ಧವಾಗಿ ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.







