ಕರ್ನಾಟಕ ರಾಜ್ಯ ಸೀರೋ ಮಲಬಾರ್ ಕಥೋಲಿಕ್ ಅಸೋಸಿಯೇಷನ್ ವತಿಯಿಂದ 'ಸಂಗಮ 2017'

ಬೆಳ್ತಂಗಡಿ, ಮೇ 17: ದೇಶದ ಪ್ರಗತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಕೊಡುಗೆಗಳು ಹೇರಳವಾಗಿದೆ. ಜಗತ್ತು ಭಾರತದತ್ತ ನೋಡುತ್ತಿರುವ ಈ ದಿನಗಳಲ್ಲಿ ಕ್ರೈಸ್ಥ ಸಮುದಾಯ ದೇಶಕ್ಕೆ ಮಹತ್ವದ ಕೊಡುಗೆಗಳನ್ನು ನೀಡಲು ಸಿದ್ದವಾಗಬೇಕು. ಯೇಶು ಕ್ರಿಸ್ತರ ಆದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರಿಗೂ ಒಳಿತನ್ನು ಬಯಸುತ್ತಾ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವಂತೆ ಸೀರೋ ಮಲಬಾರ್ ಕಥೋಲಿಕ್ ಸಭೆಯ ಆರ್ಚ್‌ಬಿಷಪ್ ಕಾರ್ಡಿನಲ್ ಜಾರ್ಜ್ ಆಲಂಚೇರಿ ಅವರು ಕರೆ ನೀಡಿದರು.
ಬೆಳ್ತಂಗಡಿಯ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸೀರೋ ಮಲಬಾರ್ ಕಥೋಲಿಕ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಸಂಗಮ 2017 ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕೇರಳದಿಂದ ಕರ್ನಾಟಕದ ವಿವಿಧ ಭಾಗಗಳಿಗೆ ಬಂದು ನೆಲೆಸಿರುವ ಕ್ರೈಸ್ಥ ಸಮುದಾಯದವರು ಇಲ್ಲಿನ ಭಾಷೆ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಈ ಮಣ್ಣಿನ ಮಕ್ಕಳಾಗಿ ಬೆಳೆದಿದ್ದಾರೆ. ಎಲ್ಲರನ್ನೂ ಪ್ರೀತಿಸುವ ಮೂಲಕವಾಗಿ ಎಲ್ಲರ ಒಳಿತಿಗಾಗಿ ಶ್ರಮಿಸುವ ಮೂಲಕ ಸಮುದಾಯ ಇನ್ನಷ್ಟು ಮುಂದುವರಿಯಲಿ ಎಂದು ಆಶಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ ಯಾವುದೇ ಒಂದು ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಆ ಸಮುದಾಯ ಮುಂದುವರಿಯಲು ಸಾಧ್ಯವಿದೆ. ಇದೀಗ ಅತ್ಯಂತ ಉತ್ತಮವಾದ ಸಮಾವೇಶವನ್ನು ಏರ್ಪಡಿಸುವ ಮೂಲಕ ಸಮಾಜದ ಏಳಿಗೆಗೆ ಹೊಸ ಕೊಡುಗೆ ನೀಡಿದೆ. ಮಲೆನಾಡಿನ ಕೃಷಿಕರು ಎದುರಿಸುತ್ತಿರುವ ರಬ್ಬರು ಬೆಳೆಯ ಬೆಲೆಕುಸಿತ ಹಾಗೂ ಕಸ್ತೂರಿ ರಂಗನ್ ವರದಿಯ ಬಗ್ಗೆ ಕೇಂದ್ರಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ ವಹಿಸಿ ಮಾತನಾಡಿದರು. ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವಾನ್ ಡಿಸೋಜ, ಬೆಳ್ತಂಗಡಿ ಶಾಸಕ ಕೆ ವಂಸಂತ ಬಂಗೇರ, ತಲಶೇರಿ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಮಾರ್ ಜಾರ್ಜ್, ಮಂಗಳೂರು ಶಾಸಕ ಜೆ ಆರ್ ಲೋಬೋ, ಕೇರಳದ ಎಂ ಜಿ ವಿಶ್ವವಿಧ್ಯಾನಿಲಯದ ನಿವೃತ್ತ ಉಪಕುಲಪತಿ ರಾಷ್ಟ್ರೀಯ ಅಲ್ಪಸಂಖ್ಯಾತ ಕಮಿಷನ್‌ನ ಸದಸ್ಯ ಸಿರಿಯಕ್ ಥೋಮಸ್, ಹಿರಿಯ ಕೆ.ಎ.ಎಸ್ ಅಧಿಕಾರಿ ಮಥಾಯಿ. ಕಥೋಲಿಕ್ ಕಾಂಗ್ರೆಸ್‌ನ ಕೇಂದ್ರೀಯ ಕಾರ್ಯದರ್ಶಿ ಬಿಜು ಪರನಿಲಮ್ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದ ಸದಸ್ಯರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ ವರ್ಗೀಸ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ಬಿಜೆಪಿ ತಾಲೂಕು ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ, ತಾ. ಪಂ ಸದಸ್ಯ ವಿ.ಟಿ ಸೆಬಾಸ್ಟಿನ್, ಸಿಪಿಐಎಂ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಬೆಳ್ತಂಗಡಿ ಚರ್ಚಿನ ಧರ್ಮಗುರುಗಳಾದ ಬೊನವೆಂಚರ್ ನಝರೆತ್, ಕೆ.ಎಸ್‌ಎಂಸಿಎ ಯ ದ.ಕ ಜಿಲ್ಲಾ ಅಧ್ಯಕ್ಷ ಬೆಟ್ಟಿ ನೆಡುನಿಲಂ, ಉಡುಪಿ ಜಿಲ್ಲಾ ಅಧ್ಯಕ್ಷ ಪಿ.ಎಲ್ ಜೋಸ್, ಕೊಡಗು ಜಿಲ್ಲಾ ಅಧ್ಯಕ್ಷ ಮ್ಯಾಥ್ಯೂ, ನಿರ್ದೇಶಕ ಫಾ ಬಿನೋಯಿ ಜೋಸೆಫ್, ಹಾಗೂ ಇತರರು ಉಪಸ್ಥಿತರಿದ್ದರು.
ಕೇಂದ್ರೀಯ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಕ್ಸೇವಿಯರ್ ಪಾಲೇಲಿ ಸ್ವಾಗತಿಸಿದರು. ಎಂಎನ್ ಜೋಸೆಫ್ ಹಾಗೂ ಟಿಜೆ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ ವಂದಿಸಿದರು.
ಸಮಾವೇಶಕ್ಕೂ ಮೊದಲು ಬೆಳ್ತಂಗಡಿಯ ಅಂಬೇಡ್ಕರ್ ಭವನದಿಂದ ಆರಂಭಿಸಿದ ಭವ್ಯ ಮೆರವಣಿಗೆ ನಗರದ ಮುಖ್ಯರಸ್ತೆಗಳ ಮೂಲಕ ಹಾದು ಕ್ರೀಡಾಂಗಣಕ್ಕೆ ಬಂದು ಸಮಾವೇಶಗೊಂಡಿತ್ತು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು.







