ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಸೌಲಭ್ಯ

ಬೆಂಗಳೂರು, ಮೇ 17: ಐಟಿ ಉದ್ಯೋಗಿಗಳನ್ನು ಸೆಳೆಯಲು ಬಸ್‌ನಲ್ಲಿ ವೈಫೈ ಆರಂಭಿಸಿದ ಬೆನ್ನಲ್ಲೇ ಇದೀಗ ಶಾಲಾ- ಕಾಲೇಜುಗಳಿಗಾಗಿ ರಿಯಾಯಿತಿ ದರದಲ್ಲಿ ಬಸ್ ಸೌಲಭ್ಯ ಒದಗಿಸುವ ಮೂಲಕ ಶಾಲಾ-ಕಾಲೇಜುಗಳನ್ನು ಬಿಎಂಟಿಸಿಯತ್ತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.
ಪ್ರತಿ ವರ್ಷವೂ ಖಾಸಗಿ ಶಾಲಾ ಕಾಲೇಜುಗಳಿಗೆ ಬಿಎಂಟಿಸಿ ಬಸ್ ಸೌಲಭ್ಯ ಒದಗಿಸುತ್ತದೆ. ಆದರೆ ಈ ವರ್ಷ ಬಿಎಂಟಿಸಿ ರಿಯಾಯಿತಿ ದರದಲ್ಲಿ ಮತ್ತಷ್ಟು ಹೆಚ್ಚಿನ ಬಸ್‌ಗಳನ್ನು ಶಾಲಾ-ಕಾಲೇಜುಗಳಿಗೆ ಒದಗಿಸಲು ನಿರ್ಧರಿಸಿದೆ.
ಹೀಗೆ ಶಾಲಾ ಕಾಲೇಜುಗಳಿಗೆ ಒದಗಿಸುವ ಬಸ್‌ನಲ್ಲಿ ಸಿಸಿಟಿವಿ ಕ್ಯಾಮರಾ, ಪ್ರಥಮ ಚಿಕಿತ್ಸೆ ಕಿಟ್, ಅಗ್ನಿಶಮನ ಸಿಲಿಂಡರ್, ಜಿಪಿಎಸ್ ಸೌಲಭ್ಯ ಇರಲಿದೆ. ಜಿಪಿಎಸ್ ಇರುವುದರಿಂದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿಯೇ ಕುಳಿತು ಈ ಬಸ್‌ಗಳು ಎಲ್ಲಿ ಸಂಚರಿಸುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಕೂಡ ನೆರವಾಗಲಿದೆ.
ಇನ್ನು ಶಿಕ್ಷಣ ಸಂಸ್ಥೆಗಳಿಗಾಗಿ ರಿಯಾಯಿತಿ ದರ ಘೋಷಿಸಿರುವ ಬಿಎಂಟಿಸಿ 50 ಆಸನಗಳಿರುವ ಬಸ್ ಕಾಲೇಜುಗಳಿಗೆ ಕಿಲೋ ಮೀಟರ್‌ಗೆ 42 ರೂಪಾಯಿಗೆ, ಶಾಲೆಗಳಿಗೆ 40 ರೂಪಾಯಿ ನೀಡುತ್ತದೆ.
42 ಆಸನದ ಬಸ್ ಕಾಲೇಜು ಹಾಗೂ ಶಾಲೆಗೆ ಪ್ರತಿ ಕಿಲೋಮೀಟರ್‌ಗೆ ತಲಾ 35 ರೂಪಾಯಿ ದರಕ್ಕೆ ಮತ್ತು 31 ಆಸನದ ಬಸ್‌ಗೆ 1 ಕಿಲೊಮೀಟರ್ ಗೆ 32 ರೂಪಾಯಿ ದರ ವಿಧಿಸಲು ನಿರ್ಧರಿಸಿದೆ.
ಇದರಿಂದ ಶಿಕ್ಷಣ ಸಂಸ್ಥೆಗಳಿಗೂ ಅನುಕೂಲವಾಗಲಿದೆ. ಒಂದು ಶಿಕ್ಷಣ ಸಂಸ್ಥೆ ಬಸ್ ಸೇವೆ ಬಳಸಿಕೊಂಡಲ್ಲಿ ರಸ್ತೆಯಲ್ಲಿ 10 ರಿಂದ 20 ಬೈಕ್, ಕಾರು ಸಂಖ್ಯೆ ಕಡಿಮೆಯಾಗಲಿದೆ. ಇದು ಟ್ರಾಫಿಕ್ ಸಮಸ್ಯೆಗೂ ಉತ್ತರವಾಗಲಿದೆ ಎನ್ನುತ್ತಾರೆ ಬಿಎಂಟಿಸಿ ನಿರ್ದೇಶಕಿ ಏಕರೂಪ ಕೌರ್.
ಒಟ್ಟಿನಲ್ಲಿ ನಷ್ಟದಿಂದ ಹೊರಬರಲು ಬಿಎಂಟಿಸಿ ಇನ್ನಿಲ್ಲದ ಕಸರತ್ತು ನಡೆಸಿರೋದಂತು ಸತ್ಯ.







