ನಾಗನ ಮುಂದೆಯೇ ಮನೆ ಮೇಲೆ ಪೊಲೀಸರು ದಾಳಿ

ಬೆಂಗಳೂರು, ಮೇ 17: ನೋಟು ಅಮಾನ್ಯಿಕರಣಗೊಂಡಿರುವ, ಕೋಟ್ಯಂತರ ರೂಪಾಯಿ ಮನೆಯಲ್ಲಿಟ್ಟುಕೊಂಡಿದ್ದ ಪ್ರಕರಣ ಸಂಬಂಧ ಈಗಾಗಲೇ ಬಂಧನವಾಗಿರುವ ರೌಡಿ ಶೀಟರ್ ವಿ.ನಾಗರಾಜ್ ಮುಂದೆಯೇ ಮನೆ ಮೇಲೆ ಪೊಲೀಸರು ಪುನಃ ದಾಳಿ ನಡೆಸಿ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬುಧವಾರ ನಗರದ ಶ್ರೀರಾಂಪುರದಲ್ಲಿರುವ ಸ್ವತಂತ್ರ ಪಾಳ್ಯದ ನಾಗರಾಜ್ ಮನೆ ಮತ್ತು ಸ್ನೇಹ ಸೇವಾ ಸಮಿತಿ ಕಚೇರಿ ಮೇಲೆ ಎಸಿಪಿ ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಹೆಣ್ಣೂರು ಠಾಣಾ ಪೊಲೀಸರು, ಬೆಳಗ್ಗೆಯೇ ನಾಗರಾಜ್‌ನ ಸಮ್ಮುಖದಲ್ಲೇ ದಾಳಿ ನಡೆಸಿದರು.
ದಾಳಿಯ ವೇಳೆ ಮನೆ ಮತ್ತು ಕಚೇರಿಯಲ್ಲಿ ಮೂರು ಲಾಂಗು, ಮಾರಕಾಸ್ತ್ರಗಳು, ಕೆಲ ಆಸ್ತಿ ದಾಖಲಾತಿಗಳು, ದಾಖಲೆ ಇಲ್ಲದ ನಗದು ದೊರೆತಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಸುಮಾರು 3 ಗಂಟೆಗೂ ಹೆಚ್ಚು ಕಾಲ ಮನೆಯನ್ನು ಪರಿಶೀಲನೆ ನಡೆಸಿದರು.
ಬಳಿಕ ರೌಡಿಶೀಟರ್ ನಾಗರಾಜ್ ತೋರಿಸಿದ ಜಾಗದಲ್ಲಿದ್ದ ಮಾರಕಾಸ್ತ್ರಗಳು ಆಸ್ತಿಪಾಸ್ತಿಯ ದಾಖಲೆಗಳು ಹಳೆಯ ನೋಟುಗಳು ದೊರೆತಿವೆ. ಅವುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗನ ಅಪರಾಧ ಪ್ರಕರಣಗಳ ವಿಚಾರಣೆಯನ್ನು ನಡೆಸಿ ಸಾಕ್ಷಾಧಾರಗಳನ್ನು ಪತ್ತೆಹಚ್ಚುತ್ತಿರುವ ಪೊಲೀಸರು, ನಾಗ ಮನೆಯಲ್ಲಿಯೇ ಉದ್ಯಮಿಗಳನ್ನು ಅಪಹರಿಸಿ ಕರೆತಂದು ಸುಲಿಗೆ ಮಾಡುತ್ತಿದ್ದ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ. ವಿಚಾರಣೆಯಲ್ಲಿ ನಾಗರಾಜ್ ದಿನಕ್ಕೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಅಪರಾಧ ಪ್ರರಕರಣಗಳ ನಿಖರ ಸಾಕ್ಷಾಧಾರಗಳನ್ನು ಸಂಗ್ರಹಿಸಲು ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.







