ವಿದ್ಯಾರ್ಥಿಗಳ ಅನುಪಾತ ಆಧರಿಸಿ ಶಿಕ್ಷಕರ ನೇಮಕಕ್ಕೆ ಸಾಹಿತಿಗಳ ಒತ್ತಾಯ
ಬೆಂಗಳೂರು, ಮೇ 17: ಅಂತಾರಾಷ್ಟ್ರೀಯ ಶಿಕ್ಷಣ ಪದ್ಧತಿಯಂತೆ ವಿದ್ಯಾರ್ಥಿಗಳ ಅನುಪಾತ ಹಾಗೂ ತರಗತಿಯ ಮಟ್ಟದಕ್ಕೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಬೇಕು. ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಬೋಧಕ ಸಿಬ್ಬಂದಿ ಅನ್ಯ ಕರ್ತವ್ಯದ ಮೇಲೆ ನಿಯೋಜನೆ ಪದ್ಧತಿಯನ್ನು ಕೈಬಿಡಬೇಕೆಂದು ನಾಡಿನ ಹಿರಿಯ ಸಾಹಿತಿಗಳು ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಭೀತಿಯಿಂದ ಪಾರು ಮಾಡುವ ಹಾಗೂ ಅವುಗಳ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣ ನೀಡುವ ಸಂಬಂಧ ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರ ಉಪಸ್ಥಿತಿಯಲ್ಲಿ ಚರ್ಚೆ ನಡೆಸಲಾಯಿತು.
ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪೂರ್ವ ಪ್ರಾಥಮಿಕ ಶಾಲೆಗಳನ್ನು ಸರಕಾರವು ತೆರೆಯುವ ಹಾಗೂ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ ಮಕ್ಕಳಿಗೆ ಕಲಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳು ಮನವಿ ಮಾಡಿದರು.
ಸಭೆಯಲ್ಲಿ ಶಾಲಾ ಸಬಲೀಕರಣ ಸಮಿತಿ ಸದಸ್ಯರಾದ ಪ್ರೊ.ಚಂದ್ರಶೇಖರ ಪಾಟೀಲ್, ಡಾ.ಕೆ.ಮರುಳಸಿದ್ಧಪ್ಪ, ಮನುಬಳಿಗಾರ್, ಪ.ಮಲ್ಲೇಶ್, ಗಂಗಾಧರ ಕುಷ್ಟಗಿ, ಬಾನುಮುಷ್ತಾಕ್, ಚಂದ್ರಶೇಖರ ದಾಮ್ಲೆ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಡಾ.ಜಿ.ರಾಮಕೃಷ್ಣ,.
ರವೀಂದ್ರ ಭಟ್ ಐನಕೈ, ವಸಂತ್, ನಗರಗೆರೆ ರಮೇಶ್, ಶ್ರೀಪಾದ್ ಭಟ್, ವಾಸು ಕೆ.ಆರ್.ಪೇಟೆ, ನಾಗೇಶ್, ಅಖಿಲ ವಿದ್ಯಾಸಂದ್ರ, ಮನೋಹರ್, ಶಶಿಧರ ಭಾರೀಘಾಟ್, ಎಚ್.ಎನ್.ಮುರಳೀಧರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







