ಹೆರಿಗೆ ಸೌಲಭ್ಯ ಯೋಜನೆಗೆ ಸಂಪುಟದ ಅಸ್ತು

ಹೊಸದಿಲ್ಲಿ,ಮೇ 17: ಹಾಲೂಡಿಸುತ್ತಿರುವ ತಾಯಂದಿರಿಗೆ ತಲಾ 6,000 ರೂ.ಗಳನ್ನು ಒದಗಿಸುವ ಹೆರಿಗೆ ಸೌಲಭ್ಯ ಯೋಜನೆಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿತು. ಆದರೆ ಯೋಜನೆಯು ಮೊದಲ ಮಗುವಿಗೆ ಮಾತ್ರ ಸೀಮಿತವಾಗಿದೆ.
ಮೊದಲ ಮಗುವಿನ ಗರ್ಭ ಧರಿಸಿರುವ ಅಥವಾ ಹಾಲೂಡಿಸುತ್ತಿರುವ ಮಹಿಳೆಯರು 6,000 ರೂ.ವರೆಗೆ ಪಡೆಯಲಿದ್ದಾರೆ. ಈ ಪೈಕಿ 5,000 ರೂ.ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನೇರ ನಗದು ವರ್ಗಾವಣೆಯ ಮೂಲಕ ಮೂರು ಕಂತುಗಳಲ್ಲಿ ನೀಡಲಿದೆ ಎಂದು ಬುಧವಾರ ಸುದ್ದಿಗಾರರಿಗೆ ಸಂಪುಟ ಸಭೆಯ ವಿವರಗಳನ್ನು ನೀಡಿದ ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಅವರು ತಿಳಿಸಿದರು.
ಮೊದಲ ಮಗುವಿನ ಗರ್ಭಿಣಿಯಾಗಿರುವ ಮಹಿಳೆಯರಿಗಾಗಿ ಈ ಯೋಜನೆಯು ಮೀಸಲಾಗಿದೆಯಾದರೂ ಪ್ರಾಯೋಗಿಕ ನೆಲೆಯಲ್ಲಿ ಮೊದಲ ಎರಡು ಸಜೀವ ಜನನಗಳಿಗೂ ಅನ್ವಯಿಸುತ್ತದೆ ಎಂದರು.
ಮಹಿಳೆ ತಾನು ಗರ್ಭವತಿಯೆಂದು ನೋಂದಾಯಿಸಿದಾಗ ಮೊದಲ 1,000ರೂ. ದೊರೆಯಲಿದೆ. ಆರು ತಿಂಗಳ ಗರ್ಭಾವಸ್ಥೆಯ ಬಳಿಕ ಕನಿಷ್ಠ ಒಂದು ಹೆರಿಗೆ ಪೂರ್ವ ತಪಾಸಣೆಯನ್ನು ಮಾಡಿಸಿಕೊಂಡಾಗ 2,000 ರೂ. ಮತ್ತು ಮಗುವಿನ ಜನನ ನೋಂದಣಿ ಹಾಗು ಅಗತ್ಯ ಲಸಿಕೆಗಳ ಮೊದಲ ಸುತ್ತಿನ ಬಳಿಕ 2,000 ರೂ.ಗಳನ್ನು ನಿಡಲಾಗುವುದು ಅರ್ಹ ಫಲಾನುಭವಿಗಳಿಗೆ ಉಳಿದ ನಗದು ಹಣದ ಪಾವತಿ ನಿಯಮಗಳಂತೆ ಮುಂದುವರಿಯಲಿದೆ ಎಂದು ಅಧಿಕೃತ ಪ್ರಕಟಣೆಯು ತಿಳಿಸಿದೆ.







