ಝಮೀರ್ ಅಹ್ಮದ್ ವಿರುದ್ಧ ಯುವ ಕಾಂಗ್ರೆಸ್ ದೂರು
ಬೆಂಗಳೂರು, ಮೇ 17: ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಬಂಡಾಯ ಶಾಸಕ ಬಿ.ಝೆಡ್. ಝಮೀರ್ ಅಹ್ಮದ್‌ಖಾನ್, ಇನ್ನೂ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನೆ ಪಡೆದಿಲ್ಲ. ಆಗಲೇ ತಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ದೂರು ನೀಡಿದ್ದಾರೆ.
ಝಮೀರ್ ಅಹ್ಮದ್ ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು ಯುವ ಕಾಂಗ್ರೆಸ್‌ನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ ಹಾಗೂ ರಾಜ್ಯ ಘಟಕದ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಮತದಾರರನ್ನಾಗಿ ನೋಂದಣಿ ಮಾಡಿಸಿ, ದಬ್ಬಾಳಿಕೆಯಿಂದ ಮತದಾನವನ್ನು ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತ ವರಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಾವು ತುಂಬಾ ಕಷ್ಟಪಟ್ಟಿದ್ದೇವೆ. ಜೆಡಿಎಸ್ ಪಕ್ಷದ ಶಾಸಕರಾಗಿದ್ದುಕೊಂಡು, ತಮ್ಮನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಕಾಂಗ್ರೆಸ್ ಹೈಕಮಾಂಡ್‌ನಿಂದ ಯಾವುದೆ ಸೂಚನೆ ಬಾರದೆ, ತಮ್ಮನ್ನು ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿ ಕೊಂಡಿರುವುದು ಸರಿಯಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ನಾವು ಮನವಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತ ಅಶೋಕ್ ಕುಮಾರ್ ಹೇಳಿದ್ದಾರೆ.