ಕೆರೆಗಳ ಕಾಲುವೆ ಕಾಮಗಾರಿಯಲ್ಲಿ ಅಕ್ರಮ: ಆರೋಪ
ಲಕ್ಷಾಂತರ ರೂ. ದುರ್ಬಳಕೆ: ತನಿಖೆಗೆ ಆಗ್ರಹ

ಶಿವಮೊಗ್ಗ, ಮೇ 17: ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆಗಳ ರಾಜ ಕಾಲುವೆ ಹಾಗೂ ಹೂಳು ತೆಗೆಯುವ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸದೆ, ಲಕ್ಷಾಂತರ ರೂ. ದುರ್ಬಳಕೆ ಯಾಗಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ವ್ಯಕ್ತವಾಗಿದೆ.
ಸಣ್ಣ ನೀರಾವರಿ ಇಲಾಖೆಯು 65 ಲಕ್ಷ ರೂ. ವೆಚ್ಚದಲ್ಲಿ ಹಾರ್ನಳ್ಳಿ ಸುತ್ತಮುತ್ತಲಿನ ಗ್ರಾಮಗಳ ಕೆರೆಗಳ ರಾಜ ಕಾಲುವೆ ನಿರ್ಮಾಣ ಹಾಗೂ ಹೂಳು ತೆಗೆಯುವ ಕೆಲಸ ನಡೆಸಿತ್ತು. ಆದರೆ, ಕೆಲವೆಡೆ ಕಾಮಗಾರಿಯೇ ನಡೆಸಿಲ್ಲ.
ಮತ್ತೆ ಕೆಲವೆಡೆ ನೆಪಮಾತ್ರಕ್ಕೆ ಸಣ್ಣಪುಟ್ಟ ಕೆಲಸ ನಡೆಸಲಾಗಿದೆ. ಟೆಂಡರ್ ನಿಯಮಗಳಿಗೆ ಅನುಗುಣವಾಗಿ ಕಾಮಗಾರಿ ಮಾಡಿಲ್ಲ. ಈ ಮೂಲಕ ಯೋಜನೆಗೆ ಮೀಸಲಿಟ್ಟ ಲಕ್ಷಾಂತರ ರೂ. ದುರ್ಬಳಕೆಯಾಗಿದೆ. ಇದರ ಹಿಂದೆ ಇಲಾಖೆಯ ಕೆಲ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಶಾಮೀಲಾಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಸ್ಥಳೀಯ ನಾಗರಿಕರು ದೂರುತ್ತಿದ್ದಾರೆ.
ಹಾರ್ನಳ್ಳಿಯ ವೀರಶೆಟ್ಟಿಕೆರೆ, ಬ್ರಹ್ಮಸಮುದ್ರಕೆರೆಯ ರಾಜಕಾಲುವೆ ನಿರ್ಮಾಣಕ್ಕೆ ಲಕ್ಷಾಂತರ ರೂ. ಹಣ ಮೀಸಲಿಡಲಾಗಿತ್ತು. ಆದರೆ, ಇಲ್ಲಿ ಸಮರ್ಪಕವಾಗಿ ಕಾಮಗಾರಿಯೇ ನಡೆಸಲಾಗಿಲ್ಲ. ಕೆಲವೆಡೆ ಕೆರೆಯ ಹೂಳು ತೆಗೆಯಲಾಗಿಲ್ಲ. ಮತ್ತೆ ಕೆಲ ಕೆರೆಗಳ ಬಳಿ ನೆಪಮಾತ್ರಕ್ಕೆ ಕೆಲಸ ನಡೆಸಲಾಗಿದ್ದು, ಇದು ಕೂಡ ಗುಣಮಟ್ಟದಿಂದ ಕೂಡಿಲ್ಲವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ತನಿಖೆ ನಡೆಸಿ: ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೆರೆಗಳ ರಾಜಕಾಲುವೆ, ಹೂಳು ತೆಗೆಯುವ ಕಾಮಗಾರಿಗಳು ಸಮರ್ಪ ಕವಾಗಿ ನಡೆದಿಲ್ಲ ಎಂದು ಕ್ಷೇತ್ರ ವ್ಯಾಪ್ತಿಯ ನಾಗರಿಕರು ತಮಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಾನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದೇನೆ. ಕಾಮಗಾರಿಯ ಅಂದಾಜು ಪಟ್ಟಿ, ಅನುದಾನದ ಮೊತ್ತ, ಕೆಲಸ ಮಾಡಿದ ವಿವರ ನೀಡುವಂತೆ ಕೋರಿದ್ದೇನೆ. ಆದರೆ ಇಲ್ಲಿಯವರೆಗೂ ಈ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ತಮಗೆ ಯಾವುದೇ ಮಾಹಿತಿ ಲಭ್ಯ ವಾಗಿಲ್ಲ.
ಇದೆಲ್ಲವನ್ನು ಗಮನಿಸಿದರೆ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಹಾರ್ನಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆ ಸೌಮ್ಯಾ ಎಸ್. ಬೋಜ್ಯನಾಯ್ಕಾ ತಿಳಿಸಿದ್ದಾರೆ. ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಇಲಾಖೆಗಳು ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿವೆ. ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದೆ.
ಇದಕ್ಕೆ ಸಣ್ಣ ನೀರಾವರಿ ಇಲಾಖೆಯು ಹಾರ್ನಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಿರುವ ಕೆರೆಗಳ ರಾಜಕಾಲುವೆ, ಹೂಳು ತೆಗೆಯುವ ಕಾಮಗಾರಿಯೇ ಉತ್ತಮ ನಿದರ್ಶ ನವಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಕ್ಷೇತ್ರದ ಜನತೆಯೊಂದಿಗೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿ: ಜಿಪಂ ಸದಸ್ಯೆ ಸೌಮ್ಯಾ
ಹಾರ್ನಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಡೆದ ಕೆರೆಗಳ ಕಾಮಗಾರಿಯ ಕುರಿತಂತೆ ಜಿಲ್ಲಾ ಪಂಚಾಯತ್ ಆಡಳಿತವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಜಂಟಿ ಸ್ಥಳ ಪರಿಶೀಲನೆ ಮಾಡಿದರೆ ಕಾಮಗಾರಿಯ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ. ಇಲ್ಲದಿದ್ದರೆ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಬಯಲಿಗೆ ಬರುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಸೌಮ್ಯಾ ಬೋಜ್ಯನಾಯ್ಕಾ ತಿಳಿಸಿದ್ದಾರೆ.







