ಗ್ರಾಮೀಣ ನಿರುದ್ಯೋಗಿಗಳಿಗೆ ಮೀಸಲಾತಿ ಜಾರಿ ಮಾಡಿ: ಮಾಜಿ ಸ್ಪೀಕರ್ ಕೃಷ್ಣ
ಮೂರನೇ ದಿನಕ್ಕೆ ರೈತರ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು, ಮೇ 17: ಸಮಗ್ರ ಗ್ರಾಮವಾಸಿಗಳ ಸಂಪೂರ್ಣ ಸಾಲ ಮನ್ನಾಕ್ಕಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ನಗರದ ಗಾಂಧಿ ಪ್ರತಿಮೆ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬುಧವಾರ ಕರ್ನಾಟಕ ರಾಜ್ಯ ಸಂಘ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಮಾಜಿ ಸಭಾಪತಿ ಕೆ.ಆರ್.ಪೇಟೆ ಕೃಷ್ಣ, ಶಾಸಕ ಬಿ.ಆರ್.ಪಾಟೀಲ್ ಭಾಗವಹಿಸಿ, ಗ್ರಾಮೀಣ ಬದುಕಿಗೆ ಆಸರೆಯಾಗಬೇಕಾದದ್ದು ಸರಕಾರದ ಕರ್ತವ್ಯವಾಗಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸುತ್ತಿರುವ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಬದುಕು ದುಸ್ಥರಗೊಂಡಿದೆ. ಬರಗಾಲದ ಹಿನ್ನೆಲೆಯಲ್ಲಿ ಇಡೀ ಭೂ ಪ್ರದೇಶ ಬಣಗುಡುತ್ತಿದ್ದು, ದುಡಿಯುವ ಕೈಗೆ ಕೆಲಸವಿಲ್ಲದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದಿಂದ ನಗರಗಳೆಡೆಗೆ ದೊಡ್ಡ ಮಟ್ಟದಲ್ಲಿ ವಲಸೆ ಹೋಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮಾಂತರ ಪ್ರದೇಶದ ಕೃಷಿ ಬದುಕು ನಿರ್ಣಾಮಗೊಂಡ ಪರಿಣಾಮ ಅಲ್ಲಿ ವಾಸಿಸುತ್ತಿರುವ ಯುವ ಜನತೆಗೆ ಸರಕಾರಿ ಹಾಗೂ ಖಾಸಗಿ ಕೆಲಸಗಳು ಅನಿವಾರ್ಯ. ಆದರೆ, ಈ ಯುವ ಜನತೆ ನಗರದ ಪ್ರದೇಶದ ಯುವ ಜನತೆಯೊಂದಿಗೆ ಪೈಪೋಟಿ ನಡೆಸಿ ನೌಕರಿಯನ್ನು ಗಿಟ್ಟಿಸಿಕೊಳ್ಳಲಾರರು. ಹೀಗಾಗಿ ಗ್ರಾಮಾಂತರ ಪ್ರದೇಶದ ಯುವ ಜನತೆಗೆ ಉದ್ಯೋಗಳಲ್ಲಿ ವಿಶೇಷ ಮೀಸಲಾತಿ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಬರಗಾಲದಿಂದ ಬಸವಳಿದಿರುವ ರೈತರು ದಿನನಿತ್ಯದ ಬದುಕನ್ನು ಸರಿದೂಗಿಸುವುದಕ್ಕೆ ಹೆಣಗಾಡುತ್ತಿದ್ದಾರೆ. ಇದರ ಜೊತೆಗೆ ಸಾಲದ ಹೊರೆಯು ಅವರ ಹೆಗಲ ಮೇಲಿರುವುದರಿಂದ ಕಂಗಾಲಾಗಿದ್ದಾರೆ. ಹೀಗಾಗಿ ಸರಕಾರ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನತೆಯ ಎಲ್ಲ ರೀತಿಯ ಸಾಲವನ್ನು ಮನ್ನಾ ಮಾಡುವ ಮೂಲಕ ಅವರ ಬದುಕಿನಲ್ಲಿ ಹೊಸ ಚೈತನ್ಯವನ್ನು ಮೂಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ, ಕರ್ನಾಟಕ ರೈತ ಸಂಘದ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಸೇರಿದಂತೆ ರೈತರ ಸಂಘದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.







