ಜಗತ್ತಿನ ಅತಿ ಹಗುರದ ಉಪಗ್ರಹ ನಿರ್ಮಿಸಿದ ಭಾರತದ ರಿಫಾತ್ ಶಾರೂಕ್
ಜೂನ್ ನಲ್ಲಿ ನಾಸಾದಿಂದ ಲಾಂಚ್

ಹೊಸದಿಲ್ಲಿ, ಮೇ 17: ಜಗತ್ತಿನ ಅತಿ ಹಗುರದ ಉಪಗ್ರಹವೊಂದನ್ನು ಭಾರತದ ಬಾಲಕನೊಬ್ಬ ತಯಾರಿಸಿದ್ದು, ಜೂನ್ ತಿಂಗಳಲ್ಲಿ ನಾಸಾ ಇದನ್ನು ಲಾಂಚ್ ಮಾಡಲಿದೆ.
ರಿಫಾತ್ ಶಾರೂಕ್ ಎನ್ನುವ ಭಾರತದ ಬಾಲಕ ನಿರ್ಮಿಸಿರುವ 64 ಗ್ರಾಂ ತೂಗುವ ಈ ಉಪಗ್ರಹ "ಐ ಡೂಡಲ್" ಆಯೋಜಿಸಿದ್ದ ಯುವ ಅನ್ವೇಷಕರ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿತ್ತು. 3ಡಿ ಪ್ರಿಂಟೆಡ್ ಕಾರ್ಬನ್ ಫೈಬರ್ ನ ಈ ಅತಿ ಹಗುರದ ಉಪಗ್ರಹಕ್ಕೆ “ಕಲಾಂ ಸ್ಯಾಟ್” (ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮರಣಾರ್ಥ) ಎಂದು ಹೆಸರಿಟ್ಟಿದ್ದು, ನಾಸಾದ ವಾಲೂಪ್ಸ್ ಐಲ್ಯಾಂಡ್ ಫೆಸಿಲಿಟಿ ಜೂನ್ ನಲ್ಲಿ ಉಪ-ಕಕ್ಷೆಯ ವಿಮಾನದಲ್ಲಿ ಉಡ್ಡಯನ ನಡೆಸಲಿದೆ. ಸುಮಾರು 12 ನಿಮಿಷಗಳ ಕಾಲ ಸೂಕ್ಷ್ಮ ಗುರುತ್ವ ಪರಿಸರದಲ್ಲಿ ಈ ಉಪಗ್ರಹ ಕಾರ್ಯ ನಿರ್ವಹಿಸಲಿದೆ.
ರಿಫಾತ್ ಶಾರೂಕ್ ಸ್ಪೇಸ್ ಕಿಡ್ಸ್ ಇಂಡಿಯಾ ಎಂಬ ವೈಜ್ಞಾನಿಕ ಶಿಕ್ಷಣ ಸಂಸ್ಥೆಯ ಪ್ರಮುಖ ವಿಜ್ಞಾನಿಯಾಗಿದ್ದಾರೆ. ಚೆನ್ನೈನ ಸಣ್ಣ ನಗರ ಪಲ್ಲಪಟ್ಟಿಯ ನಿವಾಸಿಯಾಗಿರುವ ಇವರು 15 ವರ್ಷದವರಾಗಿದ್ದಾಗ ಹೀಲಿಯಂ ವೆದರ್ ಬಲೂನೊಂದನ್ನು ನಿರ್ಮಿಸಿದ್ದರು.






